ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಮುಸ್ಲಿಮರೇ ಸ್ವತಃ ನಿಂತು ಕಾಶ್ಮೀರಿ ಪಂಡಿತರೊಬ್ಬರ ಅಂತ್ಯಕ್ರಿಯೆ ನೆರವೇರಿಸಿ ಸೌಹಾರ್ದ ಮೆರೆದಿದ್ದಾರೆ.
ಕುಲ್ಗಾಂನ ಮಲ್ವಾನ್ ನಿವಾಸಿ ಜಾನಕಿನಾಥ್(84) ಎಂಬವರೇ ಈ ಸೌಹಾರ್ದದ ಸಂಕೇತಕ್ಕೆ ಕಾರಣವಾದ ಕಾಶ್ಮೀರಿ ಪಂಡಿತ.
1990 ವೇಳೆಗೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಆರಂಭವಾದಾಗ ಕಾಶ್ಮೀರಿ ಪಂಡಿತರೆಲ್ಲರೂ ಅಲ್ಲಿಂದ ವಲಸೆ ಹೋಗಿದ್ದರು. ಕುಟುಂಬ ಸದಸ್ಯರೆಲ್ಲರೂ ಹೋದರೂ ಜಾನಕಿನಾಥ್ ಅವರು ಮಾತ್ರ ಅಲ್ಲಿಂದ ಕದಲಲಿಲ್ಲ. ನಾನು ಬದುಕಿದರೂ ಇಲ್ಲೇ, ಸತ್ತರೂ ಇಲ್ಲೇ ಎಂದು ಶಪಥ ಮಾಡಿಬಿಟ್ಟರು. ಪಟ್ಟು ಸಡಿಲಿಸದ ಕಾರಣ, ಕುಟುಂಬಸ್ಥರೆಲ್ಲರೂ ಅವರನ್ನು ಬಿಟ್ಟು ಹೊರಟು ಹೋದರು.
ಅಂದಿನಿಂದ ಜಾನಕಿನಾಥ್ ಆ ಗ್ರಾಮದ ಇತರೆ 5 ಸಾವಿರ ಮುಸ್ಲಿಮರೊಂದಿಗೆ ಬದುಕುತ್ತಿದ್ದರು. ಕಳೆದ 5 ವರ್ಷಗಳಿಂದ ಕಾಯಿಲೆ ಬಿದ್ದಿದ್ದ ಅವರನ್ನು ನೆರೆಹೊರೆಯ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಅವರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ, ಊರಿಗೆ ಊರೇ ಜಾನಕಿನಾಥ್ ಮನೆ ಮುಂದೆ ಸೇರಿತ್ತು. ನಂತರ, ಮುಸ್ಲಿಮರೇ ಸೇರಿ ಅಂತ್ಯ ಸಂಸ್ಕಾರಕ್ಕೆ ಕಟ್ಟಿಗೆ ತಂದು, ಅಂತ್ಯಕ್ರಿಯೆ ಪೂರೈಸಿದರು.