ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರಕ್ಕೆ ಸಮೀಪದ ಹಳ್ಳಿಯೊಂದರಲ್ಲಿ ಹಾಡುಹಗಲಲ್ಲೇ ನಾಲ್ವರು ತರುಣರು ಸೇರಿಕೊಂಡು ತರುಣನೊಬ್ಬನ್ನು ಮರದ ಕೋಲಿನಿಂದ ಹೊಡೆದು ಸಾಯಿಸಿದ ಘಟನೆಯನ್ನು ತೋರಿಸುವ 46 ಸೆಕೆಂಡುಗಳ ವಿಡಿಯೋ ಚಿತ್ರಿಕೆಯೊಂದು ಫೇಸ್‌ಬುಕ್‌ನಲ್ಲಿ ಎಲ್ಲರ ಗಮನ ಸೆಳೆದುಕೊಂಡಿದೆ.
ಈ ವಿಡಿಯೋ ಚಿತ್ರಿಕೆಯಲ್ಲಿ ಸ್ಪಷ್ಟವಾಗಿ ಕಂಡುಬರುವ ಹಂತಕ ತರುಣನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ಕಾರ್ಯ ನಡೆದಿದೆ.
ಗ್ಯಾಂಗ್ ವಾರ್ ಫಲಶ್ರುತಿ ಎಂದು ತಿಳಿಯಲಾಗಿರುವ ಈ ಘಟನೆಯಲ್ಲಿ ನಾಲ್ವರು ಹಂತಕರು ತರುಣನನ್ನು ಮಾರಣಾಂತಿಕವಾಗಿ ಹೊಡೆಯುವುದನ್ನು ಕಂಡ ದಾರಿ ಹೋಕರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಪೊಲೀಸರು ಧಾವಿಸಿ ಬಂದು ನೆಲಕ್ಕುರುಳಿ ಬಿದ್ದಿದ್ದ ತರುಣನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆತ ಇಂದು ಕೊನೆಯುಸಿರೆಳೆದಿದ್ದಾನೆ. ಈ ತರುಣನನ್ನು ಶಬ್ಬೀರ್ ಎಂದು ಗುರುತಿಸಲಾಗಿದೆ.
ಹಾಡುಹಗಲಲ್ಲೇ ಈ ನಡೆದಿರುವ ಭೀಕರ ಕೊಲೆಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಕೊಂಡ, ಘಟನೆಯ ಏಕೈಕ ಸಾಕ್ಷಿದಾರ ಯಾರೆಂಬುದನ್ನು ಪೊಲೀಸರು ಈ ವರೆಗೂ ತಿಳಿಸಿಲ್ಲ. ಫೇಸ್‌ಬುಕ್ ನಲ್ಲಿ ಆತ ಅಪ್‌ಲೋಡ್ ಮಾಡಿರುವ ಈ ಲೈವ್ ಕೊಲೆ ಕೃತ್ಯವನ್ನು ಈಗಾಗಲೇ ಆರು ಲಕ್ಷ ಮಂದಿ ನೋಡಿದ್ದಾರೆ.
-ಉದಯವಾಣಿ