ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದರು ಎಂಬ ಊಹಾಪೋಹಗಳಿಗೆ ಗುರುವಾರ ತೆರೆ ಎಳೆದಿರುವ ರಾಷ್ಟ್ರಪತಿಗಳು, ನಾನು ಯಾವತ್ತೂ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ ಮತ್ತು ಆ ಕುರಿತ ವರದಿಗಳು ಸುಳ್ಳು ಹಾಗೂ ಸೇಡಿನ ಕಥೆಗಳು ಎಂದು ಹೇಳಿದ್ದಾರೆ.
ತಮ್ಮ ಆತ್ಮಕತೆ ‘ಪ್ರಕ್ಷುಬ್ಧ ವರ್ಷಗಳು: 1980-96′(The Turbulent Years: 1980-96)ದ ಎರಡನೇ ಆವೃತ್ತಿಯನ್ನು ಇಂದು ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಪ್ರಣಬ್ ಮುಖರ್ಜಿ ಅವರು, ಇಂದಿರಾ ಗಾಂಧಿ ಹತ್ಯೆಯ ನಂತರ ನಾನು ಮಧ್ಯಂತರ ಪ್ರಧಾನಿಯಾಗಲು ಬಯಸಿದ್ದೆ ಎಂದು ಹಲವು ವರದಿಗಳು ಪ್ರಕಟಗೊಂಡವು. ಆದರೆ ಇವೆಲ್ಲಾ ಸಂಪೂರ್ಣ ಸುಳ್ಳು ಎಂದರು. ಅಲ್ಲದೆ ರಾಜೀವ್ ಗಾಂಧಿ ಅವರಿಗೆ ತಪ್ಪು ಮಾಹಿತಿ ನೀಡಲು ಸೃಷ್ಟಿಸಿದ ಕಥೆಗಳಿವು ಎಂದಿದ್ದಾರೆ.
ಇಂದಿರಾ ಸಾವಿನ ನಂತರ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗಿತ್ತು. ಇಂತಹ ಸಂದರ್ಭದಲ್ಲೂ ನಾನು ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಲು ಬಯಸಿ, ದಂಪತಿ(ರಾಜೀವ್ ಹಾಗೂ ಸೋನಿಯಾ)ಗಳ ಬಳಿ ತೆರಳಿದೆ. ಸೂಕ್ಷ್ಮವಾಗಿ ರಾಜೀವ್ ಅವರ ಭುಜ ತಟ್ಟಿ, ನಿಮ್ಮೊಂದಿಗೆ ತುರ್ತಾಗಿ ಮಾತನಾಡಬೇಕಿದೆ ಎಂದು ತಿಳಿಸಿದೆ. ಆಗ ಅವರು ಸೋನಿಯಾ ಅವರನ್ನು ಬಿಟ್ಟು ಬಂದರು. ನಾವು ಇಬ್ಬರೂ ಅದೇ ರೂಂನ ಬಾತ್‌ರೂಂನಲ್ಲಿ ಅವರನ್ನು ಮುಂದಿನ ಪ್ರಧಾನಿ ಮಾಡುವ ಬಗ್ಗೆ ಚರ್ಚಿಸಿದೆವು ಎಂದಿದ್ದಾರೆ.
ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿರುವ ಅವರ ಈ ಆತ್ಮಕತೆಯಲ್ಲಿ ರಾಷ್ಟ್ರಪತಿಗಳು ಬಾತ್‌ರೂಂನಲ್ಲಿ ತಮ್ಮ ಹಾಗೂ ರಾಜೀವ್ ಗಾಂಧಿ ಅವರ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವವರವನ್ನು ಬಿಚ್ಚಿಟ್ಟಿದ್ದಾರೆ.