ಫರಿದಾಬಾದ್: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ವಿದ್ಯಾರ್ಥಿನಿಯೊಬ್ಬಳು ಆಗ್ರದಲ್ಲಿ 25 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ.
ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಕಳೆದ ಜನವರಿ 4ರಿಂದ ನಾಪತ್ತೆಯಾಗಿದ್ದಳು. ಜನವರಿ 15ರಂದು ವಿದ್ಯಾರ್ಥಿನಿಯ ತಂದೆ ಅಪರಿಚಿತರು ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿದ್ದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ತಂದೆಯ ದೂರಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ದೂರವಾಣಿ ಕರೆ ಪರಿಶೀಲಿಸಿದ ಪೊಲೀಸರಿಗೆ ಒಂದು ಅಚ್ಚರಿ ಕಾದಿತ್ತು. ಏಕೆಂದರೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಆಗ್ರದ ದೆವ್ರಿ ಎಂಬಲ್ಲಿ ಮಹಿಳೆಯೊಂದಿಗೆ ವಾಸವಾಗಿದ್ದಳು.
ಮೂರು ದಿನಗಳ ಹಿಂದಷ್ಟೇ ವಿದ್ಯಾರ್ಥಿನಿ ಹಾಗೂ 25 ವರ್ಷದ ಮಹಿಳೆಯನ್ನು ಸರಣ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾವಿಬ್ಬರೂ ಮದುವೆಯಾಗಿರುವ ಪ್ರಮಾಣ ಪತ್ರ ನೀಡಿದ್ದಾರೆ.
ಸಮಾನ ಲಿಂಗಿಗಳ ಮದುವೆಗೆ ದೇಶದ ಕಾನೂನಿನ ಮಾನ್ಯತೆ ಇಲ್ಲ. ಆದರೆ ಅವರಿಬ್ಬರೂ ಒಟ್ಟಿಗೆ ವಾಸಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.