ನವದೆಹಲಿ: ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವ ಮೊದಲ ಹಂತದ 20 ನಗರಗಳ ಪಟ್ಟಿಯನ್ನು ಗುರುವಾರ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದರು. ರಾಜ್ಯದ ಬೆಳಗಾವಿ ಮತ್ತು ದಾವಣಗೆರೆ ನಗರಗಳು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯಾಗಲಿವೆ.
ಗುರುವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಬೆಳಗಾವಿ ಮತ್ತು ದಾವಣಗೆರೆ ಹೊರತು ಪಡಿಸಿ, ಸೊಲ್ಲಾಪುರ, ಇಂಧೋರ್, ಕೊಯಮತ್ತೂರು, ಕಾಕಿನಾಡ, ಉದಯಪುರ, ಗುವಾಹಟಿ, ಚೆನ್ನೈ, ಲುಧಿಯಾನ, ಭೋಪಾಲ, ಭುವನೇಶ್ವರ, ಪುಣೆ, ಜೈಪುರ, ಸೂರತ್, ಕೊಚ್ಚಿ, ಅಹಮದಾಬಾದ್, ಜಬಲ್ಪುರ, ವಿಶಾಖಪಟ್ಟಣ ನಗರಗಳು ಸ್ಥಾನ ಪಡೆದಿವೆ. ನವದೆಹಲಿ ಮುನಿಸಿಪಲ್ ಕಾರ್ಪೆರೇಷನ್ಗೆ ಸೇರಿದ ಪ್ರದೇಶ ಸಹ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯಾಗಲಿದೆ.
ಕೇಂದ್ರ ಸರ್ಕಾರವು 50,802 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲಿದೆ.
ಸ್ಮಾರ್ಟ್ ಸಿಟಿ ಯೋಜನೆಯು ಒಟ್ಟು 100 ನಗರಗಳನ್ನು ಒಳಗೊಂಡಿದ್ದು, ಮೊದಲ ಹಂತದಲ್ಲಿ 20 ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.