ರಾಷ್ಟ್ರೀಯ

ಅನಿರ್ದಿಷ್ಟ ರಜೆಯಲ್ಲಿ ತೆರಳಿದ ಹೈದರಾಬಾದ್ ವಿವಿ ಕುಲಪತಿ

Pinterest LinkedIn Tumblr

apparaoಹೈದರಾಬಾದ್: ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ವಿವಾದದಲ್ಲಿ ಸಿಲುಕಿರುವ ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ಅಪ್ಪಾರಾವ್ ಪೊಡಿಲೆ ಅವರು ಭಾನುವಾರ ಅನಿರ್ದಿಷ್ಟ ರಜೆ ಹಾಕಿದ್ದಾರೆ. ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರಿನಲ್ಲಿ ಹೆಸರು ನಮೂದಾಗಿರುವ ಹಿನ್ನೆಲೆಯಲ್ಲಿ ಅಪ್ಪಾರಾವ್ ಅವರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ವಿವಿಯ 7 ವಿದ್ಯಾರ್ಥಿಗಳು ಉಪವಾಸ ಮುಷ್ಕರ ಆರಂಭಿಸಿದ್ದರ ಮಧ್ಯೆಯೇ ಈ ವಿದ್ಯಮಾನ ಘಟಿಸಿದೆ.

ರೋಹಿತ್ ವೇಮುಲ ಅವರು ಕಳೆದ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅಪ್ಪಾರಾವ್ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದರು. ವೇಮುಲ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ಪ್ರತಿಸ್ಪರ್ಧಿ ವಿದ್ಯಾರ್ಥಿ ಸಂಘಟನೆ ಜೊತೆಗಿನ ಘರ್ಷಣೆ ಹಿನ್ನೆಲೆಯಲ್ಲಿ ವಿವಿ ಆವರಣ, ವಸತಿ ಗೃಹಗಳಿಂದ ಕಳೆದ ವರ್ಷ ಅಮಾನತುಗೊಳಿಸಲಾಗಿತ್ತು.

ಅಮಾನತು ಹಿನ್ನೆಲೆಯಲ್ಲಿ ವಿವಿಯಲ್ಲಿ ಭಾರಿ ಪ್ರತಿಭಟನೆ ಭುಗಿಲೆದ್ದಿದ್ದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನಕಾರರಿಗೆ ಬೆಂಬಲ ನೀಡಿವೆ. ಪ್ರತಿಭಟನೆಯ ಮಧ್ಯೆಯೇ ವಿಶ್ವ ವಿದ್ಯಾಲಯವು ನಾಲ್ಕು ವಿದ್ಯಾರ್ಥಿಗಳ ಅಮಾನತನ್ನು ಹಿಂತೆಗೆದುಕೊಂಡಿತ್ತು.

Write A Comment