ಮುಂಬೈ: ಕಳೆದ ವಾರ ಮುಂಬೈ ಜುಹೂ ಬೀಚ್ ನೀಲಿ ಬೆಳಕು ಝಗಮಗಿಸುತ್ತಿರುವಂತೆ ಕಂಡಿತ್ತು. ಅಲ್ಲೇನೂ ಸಿನಿಮಾ ಸೆಟ್ ಆಗಲಿ, ವಿದ್ಯುತ್‌ದೀಪದ ಅಲಂಕಾರವಾಗಲೀ ಇರಲಿಲ್ಲ. ಪ್ರಕೃತಿ ಸಹಜ ಎಂಬಂತೆ ಜುಹೂ ಬೀಚ್ ನೀಲಿ ಬಣ್ಣದ ಬೆಳಕಿನಿಂದ ಕಣ್ಮನ ಸೆಳೆದಿತ್ತು. ಇದನ್ನು ನೋಡಲು ಜನಸಾಗರವೇ ಬೀಚ್‌ಗೆ ಆಗಮಿಸಿದ್ದು, ಎಲ್ಲರಿಗೂ ಫೋಟೋ ಕ್ಲಿಕ್ಕಿಸುವ ಹಪಾಹಪಿ!
ಜುಹೂ ಬೀಚ್ ನಲ್ಲಿ ಇಂಥಾ ವೈವಿಧ್ಯಮಯ ಬದಲಾವಣೆ ಸಂಭವಿಸಿದ್ದು ಇದೇ ಮೊದಲ ಬಾರಿ. ಈ ಹಿಂದೆ ಲಕ್ಷದ್ವೀಪದಲ್ಲಿ ಇದೇ ರೀತಿಯ ಬದಲಾವಣೆ ಕಂಡುಬಂದಿರುವುದಾಗಿ ವರದಿಗಳು ಇವೆ. ಅಂದ ಹಾಗೆ ಈ ನೀಲಿ ಬೆಳಕಿನ ಹಿಂದಿರುವ ರಹಸ್ಯವೇನು?
ಇಲ್ಲಿದೆ ಉತ್ತರ
ಬಯೋಲ್ಯೂಮಿನಸೆಂಟ್ (Bioluminescent) ಎಂಬ ಕ್ರಿಯೆಯೇ ಈ ಬೆಳಕಿಗೆ ಕಾರಣ. ಫ್ಲೈಟೋಪ್ಲಾಂಗ್ಟನ್ (phytoplankton) ಪ್ರಭೇದಕ್ಕೆ ಸೇರಿರುವ ಕಡಲು ಜೀವಿಗಳು ಈ ನೀಲಿ ಬೆಳಕನ್ನು ಸೂಸುತ್ತವೆ. 05 ಮಿಲ್ಲಿಮೀಟರ್‌ನಷ್ಟು ಗಾತ್ರವಿರುವ ಜೀವಿಗಳಾಗಿವೆ ಇವು. ಈ ಜೀವಿಗಳು ಅಲೆಗಳೊಂದಿಗೆ ಸೇರಿ ಧುಮ್ಮಿಕ್ಕುವಾಗ ಅವುಗಳ ಶರೀರದಲ್ಲಿರುವ ಲ್ಯೂಸಿಫೈಡ್ಸ್ ಎಂಬ ಪ್ರೋಟೀನ್‌ಗಳು ಉತ್ತೇಜಿಸಲ್ಪಡುತ್ತವೆ. ಇದು ರಾಸಾಯನಿಕ ಕ್ರಿಯೆಗೊಳಪಟ್ಟಾಗ ನೀಲಿ ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತದೆ. ಈ ಜೀವಿಗಳ ಬಾಲದಂತೆ ಕಾಣುವ ಫ್ಲಾಜೆಲ್ಲಾ ಎಂಬ ಭಾಗದಲ್ಲಿ ಈ ಬೆಳಕು ಕಾಣಿಸಿಕೊಳ್ಳುತ್ತದೆ. ಈ ಜೀವಿಗಳಲ್ಲಿ ಚಲನೆಯುಂಟಾದಾಗ ಕೇವಲ ಸೆಕೆಂಡುಗಳಷ್ಟೇ ಕಾಲ ಬೆಳಕು ಹೊರ ಸೂಸಲ್ಪಡುತ್ತದೆ. ಹೀಗೆ ಸಾವಿರಾರು ಪ್ಲಾಟೋಫ್ಲಾಂಗ್‌ಟನ್ ಗಳು ಕಡಲು ತೀರಕ್ಕೆ ಅಪ್ಪಳಿಸಿದಾಗ ನೀಲಿ ಬಣ್ಣದ ಬೆಳಕು ಹೊರ ಸೂಸಲ್ಪಡುತ್ತವೆ. ನೀಲಿ ಅಲೆ (Blue waves) ಎಂದೂ ಇವುಗಳು ಕರೆಯಲ್ಪಡುತ್ತವೆ.