ನವದೆಹಲಿ: ಗೂಳಿ ಪಳಗಿಸುವ ಕ್ರೀಡೆ ‘ಜಲ್ಲಿಕಟ್ಟು’ ಮೇಲಿನ ನಿಷೇಧ ತೆರವುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಪರಿಣಾಮ ಈ ವರ್ಷವೂ ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ ಸಂಭ್ರಮ ಇಲ್ಲ.
ಕೇಂದ್ರ ಸರ್ಕಾರದ ನಿಷೇಧ ತೆರವು ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿತು. ಹೈಕೋರ್ಟ್ನಲ್ಲಿ ಮೊದಲ ಬಾರಿ ಜಲ್ಲಿಕಟ್ಟು ನಿಷೇಧ ಸಂಬಂಧ ವಿಚಾರಣೆ ನಡೆಸಿ ನಿಷೇಧ ಹೇರಿದ್ದ ನ್ಯಾಯಮೂರ್ತಿ ಭಾನುಮತಿ ಅವರು ಮಂಗಳವಾರ ವಿಚಾರಣೆಯಿಂದ ಹಿಂದೆ ಸರಿದರು. ಕಾರಣ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿತ್ತು.
ತಮಿಳುನಾಡಿನ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಮತ್ತು ಗುಜರಾತ್, ಹರಿಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ಗಳಲ್ಲಿ ನಡೆಯುವ ಎತ್ತು ಬಂಡಿ ಓಟ ಕ್ರೀಡೆಗಳಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಪ್ರಕಟಣೆ ಹೊರಡಿಸಿತ್ತು.