ರಾಷ್ಟ್ರೀಯ

ಬರೇ 50 ರೂ. ಕೊಟ್ರೆ ಸಾಕು ಪಠಾಣ್ ಕೋಟ್ ವಾಯುನೆಲೆ ಪ್ರವೇಶಿಸ್ಬಹುದು!

Pinterest LinkedIn Tumblr

Pathankot Attack5-700ಪಠಾಣ್‌ಕೋಟ್‌: ಏಳು ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ಆರು ಪಾಕ್‌ ಉಗ್ರರ ದಾಳಿಗೆ ಗುರಿಯಾಗಿದ್ದ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿಯ ಕೂಲಂಕಷ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಕಣ್ಣಿಗೆ ರಾಚುವಷ್ಟು ಗಂಭೀರ ಪ್ರಮಾಣದ ಭದ್ರತಾ ಲೋಪಗಳು ವಾಯುನೆಲೆಯಲ್ಲಿರುವುದು ತಡವಾಗಿ ಗೋಚರವಾಗಿದೆ.

ಪಠಾಣ್‌ಕೋಟ್‌ ವಾಯುನೆಲೆಯ ಕಾವಲು ಸಿಬಂದಿಗೆ ಜುಜುಬಿ 50 ರೂ. ಕೊಟ್ಟು ಕೈಬಿಸಿ ಮಾಡಿದರೆ ಯಾರು ಬೇಕಾದರೂ, ಎಷ್ಟು ಹೊತ್ತಿಗೆ ಬೇಕಾದರೂ ವಾಯುನೆಲೆಯನ್ನು ಅಕ್ರಮವಾಗಿ ಪ್ರವೇಶಿಸಿ ಅಡ್ಡಾಡಬಹುದು ಎನ್ನುವುದು ಒಂದು ವಿಷಯವಾದರೆ ಸ್ಥಳೀಯರು ಈ ವಾಯುನಲೆಯ ಸಿಬಂದಿಗೆ 50 ರೂ. ಮಾಮೂಲಿಯನ್ನು ಕೊಟ್ಟು ವಾಯು ನೆಲೆಯೊಳಗೆ ತಮ್ಮ ರಾಸು(ದನ)ಗಳನ್ನು ಮೇಯಲು ಬಿಡುತ್ತಿದ್ದರು ಎನ್ನುವುದು ಇನ್ನೊಂದು ಸಂಗತಿ.

ಪಠಾಣ್‌ಕೋಟ್‌ ವಾಯುನೆಲೆಯಲ್ಲಿನ ಈ ಭದ್ರತಾ ಲೋಪವನ್ನು ಕಂಡು ಎನ್‌ಐಎಗೆ ದಿಗಿಲಾಗಿದೆ ಎಂದು ಸಿಎನ್‌ಎನ್‌ ಐಬಿಎನ್‌ ವರದಿ ಮಾಡಿದೆ.

ಎಎನ್‌ಐ ಕಂಡುಕೊಂಡಿರುವ ಇತರ ಕೆಲವು ಭದ್ರತಾ ಲೋಪಗಳು ಗಂಭೀರ ಮಟ್ಟದ್ದಾಗಿವೆ. ಪಠಾಣ್‌ಕೋಟ್‌ ವಾಯು ನೆಲೆಯ ಮೇಲೆ ಪಾಕ್‌ ಉಗ್ರರು ಜನವರಿ 2ರ ನಸುಕಿನ 3 ಗಂಟೆಯ ಹೊತ್ತಿಗೆ ದಾಳಿ ಆರಂಭಿಸುವ ಎಷ್ಟೋ ಮುನ್ನ ಅವರ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ರೈಫ‌ಲ್‌ಗ‌ಳು ಇಲ್ಲಿಗೆ ತಲುಪಿ ಶೇಖರಣೆಯಾಗಿವೆ.

ಹಾಗೆ ಮಾಡುವಲ್ಲಿ ಒಳಗಿನ ಯಾರೋ ಕೆಲವು ವ್ಯಕ್ತಿಗಳು ಉಗ್ರರಿಗೆ ಪೂರ್ವ ಯೋಜಿತವಾಗಿ ನೆರವಾಗಿದ್ದಾರೆ. ಇಲ್ಲದಿದ್ದರೆ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಇತ್ಯಾದಿಗಳನ್ನು ಬೆನ್ನಲ್ಲಿ ಹೊತ್ತುಕೊಂಡು 11 ಅಡಿ ಎತ್ತರದ ವಾಯನೆಲೆ ಕಾಂಪೌಂಡ್‌ ಗೋಡೆಯನ್ನು ಏರಿ, ಹಾರಿ ಒಳಗೆ ಬರಲು ಸಾಧ್ಯವಿರುತ್ತಿರಲಿಲ್ಲ.

ಉಗ್ರರಿಗೆ 11 ಅಡಿ ಎತ್ತರ ವಾಯು ನೆಲೆ ಕಾಂಪೌಂಡ್‌ ಗೋಡ್‌ ಏರಿ, ಹಾರಿ ಬರಲು ಬೆಳಕಿನ ಅನುಕೂಲ ಕಲ್ಪಿಸುವ ಸಲುವಾಗಿ ವಾಯುನೆಲೆಯ ಒಳಗಿನ ಯಾವುದೋ ವ್ಯಕ್ತಿ ಇಲ್ಲಿನ ಫ್ಲಡ್‌ಲೈಟ್‌ಗಳನ್ನು ದಿನದ ಹಿಂದೆಯೇ ಮೇಲ್ಮುಖವಾಗಿ ತಿರುಗಿಸಿಟ್ಟಿದ್ದಾರೆ. ಹೀಗೆ ಫ್ಲಡ್‌ ಲೈಟ್‌ ತಿರುಗಿಸಿಡಲಾದ ವಿಷಯಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಈಗಾಗಲೇ ವಾಯುನೆಲೆಯ ತಾಂತ್ರಿಕ ವಿಭಾಗದ ಒಬ್ಬ ಸಿಬಂದಿಯನ್ನು ಬಂಧಿಸಿ ಪ್ರಶ್ನಿಸುತ್ತಿದ್ದಾರೆ.

ಪಠಾಣ್‌ಕೋಟ್‌ ವಾಯುನೆಲೆಗೆ ಸುಲಭದಲ್ಲಿ, ಯಾರಿಗೂ ಅಕ್ರಮ ಪ್ರವೇಶಕ್ಕೆ ಅವಕಾಶ ಕೊಡಲು 50 ರೂ.ಗಳ ಮಾಮೂಲಿಯನ್ನು ಕಿಸೆಗಿಳಿಸಿಕೊಳ್ಳುವ ವ್ಯಕ್ತಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಎನ್‌ಐಎ ಈಗ ಅವರ ಫೋನ್‌ ಸಂಭಾಷಣೆಯನ್ನು ಶೋಧಿಸುವುದಕ್ಕಾಗಿ ಮೊಬೈಲ್‌ ಟವರ್‌ ದಾಖಲೆಗಳನ್ನು ಜಾಲಾಡುತ್ತಿದೆ.
-ಉದಯವಾಣಿ

Write A Comment