ರಾಷ್ಟ್ರೀಯ

ಪಾಕ್ ನಿಂದ ನೋವು ನಿವಾರಕ ತಂದಿದ್ದ ಪಠಾಣ್ ಕೋಟ್ ಉಗ್ರರು..!

Pinterest LinkedIn Tumblr

pathankot-caseನವದೆಹಲಿ: ಪಠಾಣ್ ಕೋಟ್ ಸೇನಾವಾಯುನೆಲೆಯಲ್ಲಿ ನಡೆದಿದ್ದ ಉಗ್ರದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ನೇರ ಕೈವಾಡವಿರುವುದಕ್ಕೆ ಪ್ರಬಲ ಸಾಕ್ಷಿ ಲಭ್ಯವಾಗಿದ್ದು, ಮೃತ ಉಗ್ರರ ಜೇಬಲ್ಲಿ  ಲಾಹೋರ್ ಮತ್ತು ಕರಾಚಿಯಲ್ಲಿ ನಿರ್ಮಿತವಾದ ಔಷಧಿಗಳು ಪತ್ತೆಯಾಗಿವೆ.

ಭಾರತೀಯ ಸೈನಿಕರ ಪ್ರತಿದಾಳಿಯಿಂದಾಗಿ ಹತರಾದ ಉಗ್ರರ ಜೇಬಲ್ಲಿ ಲಾಹೋರ್ ನಲ್ಲಿ ತಯಾರಿಸಲಾದ ನೋವು ನಿವಾರಕಗಳು ಮತ್ತು ಕರಾಚಿಯಲ್ಲಿ ತಯಾರಿಸಲಾದ ಇಂಜೆಕ್ಷನ್ ಗಳು  ಪತ್ತೆಯಾಗಿವೆ.  ಈ ಮೂಲಕ ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಮಹತ್ವದ ಸಾಕ್ಷ್ಯಗಳು ದೊರೆತಂತಾಗಿವೆ. ಇದಲ್ಲದೆ ಉಗ್ರರ ದಾಳಿ  ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ಮಾದಕವಸ್ತುಗಳು, ಸುಗಂಧ ದ್ರವ್ಯ ಲಭ್ಯವಾಗಿದ್ದು, ಇದಲ್ಲದೆ ಉಗ್ರರು ತಿನ್ನಲು ತಂದಿದ್ದ ಆಹಾರ ಪದಾರ್ಥಗಳು ಮತ್ತು ಖರ್ಜೂರ ಪತ್ತೆಯಾಗಿದೆ.

ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದ 6 ಜನರ ಉಗ್ರರ ಪೈಕಿ, ಇಬ್ಬರು ವಾಯುನೆಲೆಯಲ್ಲಿರುವ ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್ ಗಳನ್ನು ನಾಶ ಮಾಡಲು ಮತ್ತು ಮತ್ತೆ ನಾಲ್ವರು  ಸೈನಿಕರ ದಿಕ್ಕು ತಪ್ಪಿಸಲು ಯತ್ನಿಸಿದ್ದರು ಎಂದು ತನಿಖಾ ದಳದ ಸಿಬ್ಬಂದಿ ತಿಳಿಸಿದ್ದಾರೆ. ತನಿಖಾಧಿಕಾರಿಗಳಿಂದ ತಿಳಿದುಬಂದ ಮತ್ತೊಂದು ಪ್ರಮುಖ ಅಂಶವೆಂದರೆ ಇಬ್ಬರು ಉಗ್ರರು ದಾಳಿ  ನಡೆಯುವ 24 ಗಂಟೆಗಳ ಮುನ್ನವೇ ವಾಯುನೆಲೆ ಪ್ರವೇಶಿಸಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ. ಲಾಹೋರ್ ವಾಯುನೆಲೆಯಲ್ಲಿ ಉಗ್ರರಿಗೆ ತರಬೇತಿ ನೀಡಿದ ಕುರಿತು ಮತ್ತು ಲಾಹೋರ್  ಬಳಿಯಲ್ಲಿಯೇ ಉಗ್ರರು ದಾಳಿಗೆ ಪ್ಲಾನ್ ರೂಪಿಸಿದ ವಿಚಾರಕೂಡ ಇದೀಗ ಬಹಿರಂಗಗೊಂಡಿದೆ.

ಪಠಾಣ್ ಕೋಟ್ ಉಗ್ರ ದಾಳಿ ಮಾಸ್ಟರ್ ಮೈಂಡ್ ಗಳನ್ನು ಈಗಾಗಲೇ ತನಿಖಾ ದಳದ ಅಧಿಕಾರಿಗಳು ಗುರುತಿಸಿದ್ದು, ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ರೂವಾರಿ ಮೌಲಾನಾ  ಮಸೂದ್ ಅಜರ್ ದಾಳಿ ನೇತೃತ್ವ ವಹಿಸಿಕೊಂಡಿದ್ದ. ದಾಳಿಗೂ ಮುನ್ನ ಈತ ಉಗ್ರರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದ ಎಂದು ಹೇಳಲಾಗುತ್ತಿದೆ.

Write A Comment