
ನವದೆಹಲಿ, ಡಿ.21: ಡೆಲ್ಲಿ ಆಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಸಿಸಿಎ)ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವುದನ್ನು ಖಂಡಿಸಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅರವಿಂದ್ ಕೇಜ್ರಿವಲ್ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ನಾಯಕರಾದ ಸಂಜಯ್‌ಸಿಂಗ್, ರಾಘವ್ ಚಡ್ಡಾ, ಆಶುತೋಷ್ ಮತ್ತು ದೀಪಕ್ ಬಾಜ್‌ಪೇಯಿ ಅವರು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಅರುಣ್ ಜೈಟ್ಲಿ ಈ ಐವರ ವಿರುದ್ಧ 10 ಕೋಟಿ ರೂ.ಗಳ ಪರಿಹಾರ ಕಟ್ಟಿಕೊಡುವಂತೆ ಇಂದು ಮೊಕದ್ದಮೆ ದಾಖಲಿಸಿದರು.
ಭಾರತೀಯ ದಂಡ ಸಂಹಿತೆ 500ರ ಅಡಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೈಟ್ಲಿ ಇಲ್ಲಿನ ಪಾಟಿಯಾಲಾ ಹೌಸ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಡಿಡಿಸಿಎ ನಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ದೆಹಲಿ ಸರ್ಕಾರ ನಿನ್ನೆ ಗೋಪಾಲ ಸುಬ್ರಮಣಿಯಮ್ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸುವಂತೆ ನಿನ್ನೆ ಆದೇಶ ಹೊರಡಿಸಿದೆ.