ಮುಂದಿನ ಜನವರಿ1 2016ರಿಂದ ಆರಂಭಗೊಂಡಂತೆ ಪ್ಯಾನ್ ಕಾರ್ಡ್ ಅಗತ್ಯದ ಬಗ್ಗೆ ಹೊಸ ಘೋಷಣೆಯನ್ನು ಇದೀಗ ಮಾಡಲಾಗಿದೆ. ಪಾನ್ ನಂಬರ್/ಕಾರ್ಡ್ ಪಡೆದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯವಲ್ಲವಾದರೂ ಪಾನ್ ನಂಬರ್ ನಮೂದಿಸುವುದನ್ನು ಈ ಕೆಳಗಿನ ಸಂದರ್ಭಗಳಲ್ಲಿ ಕಡ್ಡಾಯ ಮಾಡಿದ್ದಾರೆ. 1ರೂ. 2 ಲಕ್ಷ ಮೀರಿದ ಯಾವುದೇ ರೀತಿಯ ಹಣಕಾಸಿನ ವ್ಯವಹಾರದ ಸಂದರ್ಭ ಪಾನ್ ಕಾರ್ಡ್ ನಂಬರ್ ನಮೂದಿಸುವುದನ್ನು ಕಡ್ಡಾಯ ಮಾಡಿದ್ದಾರೆ. ಈ ಕಾನೂನು ನಗದು ಹಾಗೂ ಚೆಕ್ ಇವೆರಡು ವ್ಯವಹಾರಗಳನ್ನೂ ಒಳಗೊಂಡಿದೆ. 2015ರ ಬಜೆಟ್ನಲ್ಲಿ ಘೋಷಿಸಿದ 1 ಲಕ್ಷ ರೂ. ಮಿತಿಯನ್ನು 2 ಲಕ್ಷ ರೂ.ಗೆ ಹೆಚ್ಚಿಸಿ ಈ ಕಾನೂನು ರೂಪಿಸಲಾಗಿದೆ.
2 ಲಕ್ಷ ರೂ.ಗಿಂತ ಮೀರಿದ ಚಿನ್ನ ಮತ್ತು ಚಿನ್ನಾಭರಣಗಳ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ. ಈ ಮಿತಿ ಈವರೆಗೆ 5 ಲಕ್ಷ ರೂ. ಆಗಿತ್ತು. ಭೂಮಿ, ಕಟ್ಟಡ ಇತ್ಯಾದಿ ಸ್ಥಿರಾಸ್ತಿಯ ವ್ಯವಹಾರಕ್ಕೆ 10 ಲಕ್ಷ ರೂ. ಮೀರಿದರೆ ಪಾನ್ ಕಾರ್ಡ್ ನಂಬರ್ ನೀಡುವುದು ಇನ್ನು ಮುಂದೆ ಕಡ್ಡಾಯ. ಈವರೆಗೆ ಈ ಮಿತಿ 5 ಲಕ್ಷ ರೂ. ಆಗಿತ್ತು. ನಗದಿನಲ್ಲಿ ಪಾವತಿಸಿದ ಹೊಟೇಲ್ ಬಿಲ್, ವಿದೇಶೀ ಯಾನದ ಟಿಕೆಟ್, ವಿದೇಶೀ ವಿನಿಮಯದ ಖರೀದಿ, ಕ್ಯಾಶ್ ಕಾರ್ಡ್/ಪ್ರಿಪೈಡ್ ಕಾರ್ಡ್, ಮಾರುಕಟ್ಟೆಯಲ್ಲಿ ಲಿಸ್ಟ್ ಆಗದ ಶೇರು-ಇಂತೀ ವ್ಯವಹಾರಗಳಿಗೆ 50,000 ರೂ. ಮಿತಿ ಮೀರಿದರೆ ಪ್ಯಾನ್ ನಂಬರ್ ಬಳಕೆ ಕಡ್ಡಾಯ. ಈ ಮೊದಲು ಹೋಟೆಲ್ ಮತ್ತು ವಿದೇಶೀ ಯಾನದ ಪ್ಯಾನ್ಮಿತಿ 25, 000 ರೂ. ಆಗಿತ್ತು. ಎಲ್ಲ ಬ್ಯಾಂಕ್ ಹಾಗೂ ಕೊ-ಆಪರೇಟಿವ್ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವ ಸಂದರ್ಭ ಪಾನ್ ನಂಬರ್ ಬೇಕೇ ಬೇಕು-ಆದರೆ ಜನ್-ಧನ್ ಯೋಜನೆಯಡಿ ಖಾತೆಗಳಿಗೆ ಮಾತ್ರ ವಿನಾಯಿತಿ ಇದೆ.
ರೂ. 50,000ಕ್ಕಿಂತ ಜಾಸ್ತಿ ಠೇವಣಿಯನ್ನು ಬ್ಯಾಂಕ್/ಕೋ-ಆಪರೇಟಿವ್/ನಿಧಿ/ಬ್ಯಾಂಕೇತರ ವಿತ್ತೀಯ ಸಂಸ್ಥೆಗಳಲ್ಲಿ ಇಡುವಾಗ ಮತ್ತು ಅಷ್ಟು ಮೊತ್ತವನ್ನು ನಗದಾಗಿ ಖಾತೆಗೆ ಜಮಾ ಮಾಡುವಾಗ ಮತ್ತು ಅಷ್ಟು ವಿಮಾ ಕಂತು ಕಟ್ಟುವಾಗ ಪ್ಯಾನ್ ನಂಬರ್ ನೀಡಲೇಬೇಕು. ಆದರೆ ಅಂಚೆ ಕಚೇರಿಯ ಸಣ್ಣ ಉಳಿತಾಯದ ಯೋಜನೆಗಳಿಗೆ ಈ ಕಾನೂನಿನಿಂದ ರಿಯಾಯಿತಿ ನೀಡಲಾಗಿದೆ. ಹೊಸ ಕಾನೂನಿನಲ್ಲಿ ಸ್ಥಿರ ಮತ್ತು ಚರ ದೂರವಾಣಿಗಳನ್ನು ಪಡೆಯುವ ಸಂದರ್ಭ ಪಾನ್ ಕಾರ್ಡ್ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
(ಪ್ಯಾನ್ ಕಾರ್ಡ್ ಇಲ್ಲದವರು ನಿಗದಿತ ಐಡಿ ಪುರಾವೆಗಳನ್ನು ನೀಡತಕ್ಕದ್ದು. ಅಂತಿಮವಾದ ನೋಟಿಫಿಕೇಶನ್ ಇನ್ನೂ ಬರದ ಕಾರಣ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ) ಉಳಿದಂತೆ ಶೇರು ವ್ಯವಹಾರಕ್ಕಾಗಿ ಡಿ-ಮ್ಯಾಟ್ ಖಾತೆ ತೆರೆಯುವಾಗ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಕೊಳ್ಳುವಾಗ. ಮ್ಯೂಚುವಲ್ ಫಂಡ್, ಬಾಂಡ್, ಡಿಬೆಂಚರ್ಗಳಿಗಾಗಿ KYC (Know your Customer) ಮಾಡಿಸಿಕೊಳ್ಳುವಾಗ, ಆದಾಯ ತೆರಿಗೆಯ ಹೇಳಿಕೆ ಸಲ್ಲಿಕೆ ಮಾಡುವಾಗ ಪಾನ್ ಕಾರ್ಡ್ ಬಳಕೆ ಇದ್ದೇ ಇದೆ.
ಈ ರೀತಿ ಕಾಳಧನವನ್ನು ಹಿಡಿದು ಹಾಕಲು ಸುಲಭವಾಗುವಂತೆ ಎಲ್ಲ ವ್ಯವಹಾರಗಳಿಗೂ ನಿಧಾನವಾಗಿ ಪಾನ್ ನಂಬರ್ ಕಡ್ಡಾಯವಾಗಲಿದೆ. ಅಲ್ಲದೆ, ಈಗ 2 ಲಕ್ಷ ರೂ. ಎಂದು ಹೇಳಲಾದ ಮಿತಿಯನ್ನು 1 ಲಕ್ಷ ರೂ.ಗೆ ಇಳಿಸುವ ದಿನ ದೂರವಿಲ್ಲ. ಅಂತಹ ಸಂದರ್ಭ ಒಂದು ಪಾನ್ ಕಾರ್ಡ್ ಪಡಕೊಳ್ಳುವ ಸುಲಭ ಹೆಜ್ಜೆಗಳ ಬಗ್ಗೆ ಒಂದಷ್ಟು ಚರ್ಚಿಸೋಣ:
ಪ್ಯಾನ್ ಕಾರ್ಡ್ಗೆ ಅರ್ಜಿ
ಪ್ಯಾನ್ ಕಾರ್ಡ್ಗೆ ಅರ್ಜಿ ಯಾವುದೇ ಭಾರತೀಯ ಪ್ರಜೆಯೂ ಹಾಕಬಹುದು. ಮೈನರ್ ಮಕ್ಕಳೂ ಅಗತ್ಯ ಬಿದ್ದರೆ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಅಂತಹವರ ಕಾರ್ಡ್ನಲ್ಲಿ ಅವರ ಪ್ರತಿನಿಧಿಗಳ/ಹೆತ್ತವರ ವಿವರಗಳೂ ಬರುತ್ತವೆ. ಮೈನರುಗಳ ಆದಾಯವನ್ನು ಆದಾಯ ಕರದಡಿಯಲ್ಲಿ ಅವರ ಹೆತ್ತವರ (ತಂದೆ ಯಾ ತಾಯಿ, ಯಾರ ಆದಾಯ ಅಧಿಕವೋ ಅವರ) ಅದಾಯದೊಂದಿಗೆ ಸೇರಿಸಲ್ಪಟ್ಟು ಹೆತ್ತವರು ಅದರ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ.
ಅವರು 18 ತುಂಬಿದ ವರ್ಷದಿಂದ ಅವರದ್ದೇ ಆದ ಪ್ರತ್ಯೇಕ ಖಾತೆ ತೆರೆಯಲ್ಪಡುತ್ತದೆ ಹಾಗೂ ಅವರು ಅವರದ್ದೇ ಆದ ಪ್ರತ್ಯೇಕ ಆದಾಯ ಕರದ ಮಿತಿ ಹೊಂದುತ್ತಾರೆ. ಪಾನ್ ಕಾರ್ಡ್ ಹೊಂದಿದಾಕ್ಷಣ ಕರ ಕಟ್ಟಬೇಕು ಎನ್ನುವ ತಪ್ಪು ಅಭಿಪ್ರಾಯ ಹಲವರ ಮನಸ್ಸಿನಲ್ಲಿದೆ. ಹಾಗೇನೂ ಇಲ್ಲ. ಮೂಲತಃ ಕರಾರ್ಹರು ಮಾತ್ರ ಕರ ಕಟ್ಟಬೇಕಾಗುತ್ತದೆ. ಪ್ಯಾನ್ ಕಾರ್ಡ್ ಹೊಂದಿರುವ ಕಾರಣಕ್ಕೆ ಕರ ಕಟ್ಟಬೇಕು ಎನ್ನುವುದು ತಪ್ಪು ಅಭಿಪ್ರಾಯ.
ಪ್ಯಾನ್ ಅರ್ಜಿ ಕೇಂದ್ರ
ಪ್ಯಾನ್ ಕಾರ್ಡ್ಗೆ ಅರ್ಜಿಯನ್ನು ‘ಯುಟಿಐಐಟಿಎಸ್ಎಲ್’ ಅಥವಾ ‘ಎನ್ಎಸ್ಡಿಎಲ್’ ಸೇವಾ ಕೇಂದ್ರಗಳಲ್ಲಿ ಸ್ವೀಕರಿಸಲಾಗುತ್ತದೆ. ಅಲ್ಲಿ ಸ್ವತಃ ಅಥವಾ ಪೋಸ್ಟ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅವರು ನೀಡುವ ಸ್ವೀಕೃತಿ ಪ್ರತಿಯನ್ನು ಜಾಗ್ರತೆಯಿಂದ ತೆಗೆದಿಟ್ಟುಕೊಳ್ಳಿ. ಅರ್ಜಿಯನ್ನು ಆನ್ಲೈನ್ ಮುಖಾಂತರ ಕೂಡ ಸಲ್ಲಿಸಬಹುದು. ಆನ್-ಲೈನ್ ಅರ್ಜಿ ಸಲ್ಲಿಸುವವರು ಅದರ ಒಂದು ಪ್ರತಿಯನ್ನು ಎನ್ಎಸ್ಡಿಎಲ್ ಕಚೇರಿಗೆ ಕಳುಹಿಸತಕ್ಕದ್ದು.
ಫಾರ್ಮ್ 49ಎ: ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವವರು ಫಾರ್ಮ್ 49ಎ ಯನ್ನು ತುಂಬಬೇಕು. ಇದು ಸೇವಾ ಕೇಂದ್ರಗಳಲ್ಲಿ ಸಿಗುತ್ತದೆ. ಇದು ಸರಳವಾದ 2 ಪುಟಗಳ ಅರ್ಜಿ ಫಾರ್ಮ್. ಇಂಟರ್ನೆಟ್ ಮೂಲಕ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು. ಈ ಅರ್ಜಿಯಲ್ಲಿ ಎರಡು ಫೋಟೋಗಳನ್ನು ಸೂಕ್ತ ಜಾಗದಲ್ಲಿ ಸಹಿಯ ಜೊತೆಗೆ ಲಗ್ತೀಕರಿಸಬೇಕು. ಫಾರ್ಮಿನಲ್ಲಿ ಹೆಸರು, ವಿಳಾಸ, ಸಂಪರ್ಕ ವಿವರಗಳು, ಆದಾಯದ ಮೂಲ, ಆಧಾರ್ ಸಂಖ್ಯೆ (ಇದ್ದಲ್ಲಿ) ಹಾಗೂ ಮೈನರ್ ಆದರೆ ಪ್ರತಿನಿಧಿಸುವವರ ವಿವರಗಳನ್ನು ನೀಡಬೇಕು.
ದಾಖಲೆಗಳು: ಈ ಕೆಳಗಿನ ದಾಖಲೆಗಳು ಪಾನ್ ಅರ್ಜಿಯ ಜೊತೆಗೆ ಅಗತ್ಯವಾಗಿ ಬೇಕಾಗುತ್ತದೆ: ಫೋಟೋ – 2 ಕಾಪಿ: ವಿಳಾಸ ಪುರಾವೆ- ಆಧಾರ್, ರೇಶನ್ ಕಾರ್ಡ್, ವೋಟರ್ಸ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್ಪೋರ್ಟ್, ಮೂರು ತಿಂಗಳ ಒಳಗಿನ ವಿದ್ಯುತ್, ಟೆಲಿಫೋನ್, ನೀರಿನ ಬಿಲ್, ಇತ್ಯಾದಿ. – ಯಾವುದಾದರು ಒಂದು.
ಗುರುತಿನ ಪುರಾವೆ: ಆಧಾರ್, ರೇಶನ್ ಕಾರ್ಡ್, ವೋಟರ್ಸ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್ಪೋರ್ಟ್, ಇತ್ಯಾದಿ. – ಯಾವುದಾದರು ಒಂದು.
ಜನ್ಮ ದಿನದ ಪುರಾವೆ: ಜನ್ಮ ದಾಖಲೆ, ಆಧಾರ್, ಮೆಟ್ರಿಕ್ಯುಲೇಶನ್ ಸರ್ಟಿಫಿಕೇಟ್, ಇತ್ಯಾದಿ ಯಾವುದೇ ಜನ್ಮ ದಿನಾಂಕದ ಪುರಾವೆ – ಯಾವುದಾದರು ಒಂದು. ವಿವಿಧ ಪುರಾವೆಗಳ ಪಟ್ಟಿಯನ್ನು ಅರ್ಜಿ ಫಾರ್ಮಿನಲ್ಲಿಯೇ ನಮೂದಿಸಲಾಗಿದೆ. ಲಗ್ತೀಕರಿಸಿದ ದಾಖಲೆಗಳಲ್ಲಿರುವ ಹೆಸರು, ವಿಳಾಸ ಇತ್ಯಾದಿ ವಿವರಗಳು ಒಂದಕ್ಕೊಂದು ಹೊಂದಾಣಿಕೆ ಆಗಿರುವುದು ಅತ್ಯಗತ್ಯ. ಹೊಂದಾಣಿಕೆ ಇಲ್ಲದ ಅರ್ಜಿಗಳು ತಿರಸ್ಕೃತವಾಗುವುದು ಖಂಡಿತ.
ಎಲ್ಲ ದಾಖಲೆಗಳಲ್ಲೂ ಸ್ವಸಹಿ ಇರಬೇಕು. (ಸೆಲ್ಫ್ ಎಟೆಸ್ಟೇಶನ್). ಒಂದೇ ದಾಖಲೆಯಲ್ಲಿ ಒಂದಕ್ಕಿಂತ ಜಾಸ್ತಿ ವಿವರಗಳಿದ್ದರೆ ಅದನ್ನೇ ಅವಕ್ಕೆ ಬಳಸಬಹುದು. ಉದಾ: ಆಧಾರ್ ಕಾರ್ಡ್ ಒಂದನ್ನೇ ಗುರುತಿನ ಚೀಟಿ, ವಿಳಾಸ ಪುರಾವೆ ಹಾಗೂ ಜನ್ಮ ದಿನಾಂಕದ ಪುರಾವೆಯಾಗಿ ಎಲ್ಲ ಮೂರೂ ಉದ್ದೇಶಗಳಿಗೂ ಬಳಸಬಹುದು.
ಫೀಸ್: ಪಾನ್ ಕಾರ್ಡ್ನ ಫೀಸ್ ಕೇವಲ ರೂ. 93+ ಶೇ. 14.5 ಸರ್ವಿಸ್ ಕರ = ಒಟ್ಟು ರೂ 107. ಇದನ್ನು ಸೇವಾ ಕೇಂದ್ರಗಳಲ್ಲಿ ನಗದಾಗಿ ಅಥವಾ ಅಂಚೆಯಲ್ಲಿ ಕಳುಹಿಸುವುದಾದರೆ ಡಿಡಿ ಮೂಲಕ ಪಾವತಿಸಬಹುದು. ಆನ್-ಲೈನ್ ಅರ್ಜಿ ತುಂಬುವವರು ನೆಟ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ಗಳ ಮೂಲಕ ಪಾವತಿ ಮಾಡಬಹುದು.
ಅವಧಿ: ಪಾನ್ ಕಾರ್ಡ್ ಸಲ್ಲಿಸಿದ ಬಳಿಕ ಸುಮಾರು 2-3 ವಾರಗಳಲ್ಲಿ ಪೋಸ್ಟ್ ಮುಖಾಂತರ ಕಾರ್ಡ್ ನಿಮ್ಮ ವಿಳಾಸ ತಲಪುತ್ತದೆ. ಅಲ್ಲಿಯವರೆಗೆ ಕಾರ್ಡ್ನ ಸ್ಥಿತಿಗತಿಗಳನ್ನು ಆನ್-ಲೈನ್ ಮೂಲಕ ಯುಟಿಐಐಟಿಎಸ್ಎಲ್ ವೆಬ್ಸೈಟ್ನಲ್ಲಿ ನೋಡಿ ತಿಳಿಯಬಹುದು. ಅರ್ಜಿಯ ಸ್ವೀಕೃತಿ ಪ್ರತಿ/ರಸೀದಿಯ ನಂಬರ್ ಹಾಕಿ ಈ ಸೈಟಿನಲ್ಲಿ ಸ್ಟೇಟಸ್ ತಿಳಿಯಬಹುದು.
– ಜಯದೇವ ಪ್ರಸಾದ ಮೊಳೆಯಾರ ; jayadev.prasad@gmail.com
–