ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದ್ದು, ಕಾಂಗ್ರೆಸ್ ಈಗಲೂ ಭ್ರಷ್ಟಾಚಾರಕ್ಕೆ ಸಾಥ್ ನೀಡುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜಾಮೀನು ವಿಚಾರ ಸಂಬಂಧ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಕಾಂಗ್ರೆಸ್ ಮುಕ್ತ ಎಂದರೆ ಭ್ರಷ್ಟಾಚಾರ ಮುಕ್ತ ಎಂದರ್ಥ ಎಂದರು.
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದು ಇಂದು ಮತ್ತೆ ಸಾಬೀತಾಗಿದೆ. ಕಾಂಗ್ರೆಸ್ ಈಗಲೂ ಭ್ರಷ್ಟಾಚಾರದ ಪರ ಹೋರಾಡುತ್ತಿದೆ. ಭ್ರಷ್ಟರನ್ನು ದೇಶಭಕ್ತರಂತೆ ಬಿಂಬಿಸುವ ಮೂಲಕ ಭ್ರಷ್ಟಾಚಾರಕ್ಕೆ ಸಾಥ್ ನೀಡುತ್ತಿದೆ ಎಂದು ನಖ್ವಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ನಾವು ಯಾರಿಗೂ ಹೆದರುವುದಿಲ್ಲ ಎಂಬ ಸೋನಿಯಾ ಗಾಂಧಿ ಅವರ ಹೇಳಿಕೆಗೆ ತೀರುಗೇಟು ನೀಡಿದ ನಖ್ವಿ, ನೀವು ಹೆದರ ಬೇಡಿ, ಬೇರೆಯವರನ್ನೂ ಹೆದರಿಸಬೇಡಿ. ಕೋರ್ಟ್ನ ಹೋರಾಟವನ್ನು ಕೋರ್ಟ್ನಲ್ಲೇ ಮಾಡಿ. ಕೋರ್ಟ್ನ ವಿಚಾರಗಳಿಗೆ ಬೇರೆ ಪಕ್ಷವನ್ನು ದೂರುವುದು ಏಕೆ? ಕೋರ್ಟ್ ವಿಚಾರಗಳಿಗೆ ರಾಜಕೀಯ ಬಣ್ಣವೇಕೆ? ಎಂದು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಸೋನಿಯಾ, ನಾವು ಯಾರಿಗೂ ಹೆದರುವುದಿಲ್ಲ ಮತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಡುವುದಿಲ್ಲ ಎಂದಿದ್ದರು.