ನವದೆಹಲಿ: ಭಾರತದಲ್ಲಿ ಕಾನೂನು ಪ್ರಕಾರ ಹೆಣ್ಮಕ್ಕಳ ಮದುವೆ ವಯಸ್ಸು 18. ಆದರೆ ನಮ್ಮ ದೇಶದಲ್ಲಿ 8.32 ಅಪ್ರಾಪ್ತೆಯರಿಗೆ ಮದುವೆಯಾಗಿದೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಹೀಗೆ ಮದುವೆಯಾದ ಅಪ್ರಾಪ್ತೆಯರಲ್ಲಿ ಶೇ. 16ರಷ್ಟು ಮಂದಿ ಮದುವೆಯಾದ ಒಂದು ವರ್ಷದಲ್ಲೇ ಗರ್ಭಿಣಿಯರಾಗಿದ್ದಾರೆ. ಇದರಲ್ಲಿ ಶೇ. 7 ಮಂದಿ ಅಂದರೆ 9.5 ಹೆಣ್ಮಕ್ಕಳು ಎಳೆ ವಯಸ್ಸಲ್ಲಿ ಗರ್ಭ ಧರಿಸಿ ಅಸು ನೀಗಿದ್ದಾರೆ.
ಭಾರತದಲ್ಲಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಬಿಹಾರ್, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ತಮಿಳ್ನಾಡು ಮತ್ತು ಕರ್ನಾಟಕದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತವೆ. ಅದರಲ್ಲಿಯೂ ಉತ್ತರಪ್ರದೇಶದಲ್ಲಿ ಶೇ. 15 ರಷ್ಟು ಬಾಲ್ಯವಿವಾಹಗಳು ನಡೆಯುತ್ತವೆ.
ಹೆಚ್ಚಿನ ಹೆಣ್ಮಕ್ಕಳು ಅಮ್ಮನಾಗುವ ಹೊತ್ತಿಗೆ 19 ರ ಹರೆಯದವರಾಗಿರುತ್ತಾರೆ. ಆ ವಯಸ್ಸಿನಲ್ಲಿ ಅವರ ದೇಹ ಹೆರಿಗೆಗೆ ಸಿದ್ಧವಾಗಿರುವುದಿಲ್ಲ. ಇದರಿಂದಾಗಿಯೇ ಸಮಸ್ಯೆಗಳು ಎದುರಾಗುತ್ತವೆ ಅಂತಾರೆ ಉತ್ತರ ಪ್ರದೇಶದ ವೈದ್ಯೆ ಡಾ. ನೀರಾ ಜೈನ್.
ಹೀಗೆ ಅಪ್ರಾಪ್ತೆಯರಿಗೆ ಹುಟ್ಟಿದ ಮಕ್ಕಳ ತೂಕ ಕಡಿಮೆಯಾಗಿದ್ದು, ಇದು ಮಕ್ಕಳಲ್ಲಿಯೂ ಸಮಸ್ಯೆಗಳನ್ನುಂಟು ಮಾಡುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಹಳ್ಳಿಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಲೇ ಇವೆ.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು, ಬಡತನ, ಅನಕ್ಷರತೆ ಮೊದಲಾದವುಗಳು ಕೂಡಾ ಅಪ್ರಾಪ್ತೆಯರ ವಿವಾಹ ಮತ್ತು ಗರ್ಭಧಾರಣೆಗೆ ಕಾರಣ ಎಂದು ಹೇಳಲಾಗುತ್ತಿದೆ.