
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸೇರಲು ತೆರಳಿದ್ದ ೨೩ ವರ್ಷದ ಚೆನ್ನೈ ನಿವಾಸಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ಬಂಧಿಸಿದೆ.
ದಿನಪತ್ರಿಕೆಯೊಂದು ವರದಿ ಮಾಡಿರುವಂತೆ, ಕಂಪ್ಯೂಟರ್ ತಜ್ಞ ಮೊಹಮ್ಮದ್ ನಾಸೆರ್ ಫಕೀರ್ ದುಬೈಗೆ ತೆರಳಿ ಐ ಎಸ್ ನ ನೇಮಕಾತಿ ಅಧಿಕಾರಿ ‘ಮ್ಯಾಡ್ ಮುಲ್ಲಾ’ ಎಂಬುವವನೊಂದಿಗೆ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.
ನಂತರ ಫಕೀರ್ ಸುಡಾನ್ ಗೆ ತೆರಳುವಂತೆ ಸೂಚಿಸಿರುವ ‘ಮ್ಯಾಡ್ ಮುಲ್ಲಾ’ ಅಲ್ಲಿಂದ ಲಿಬಿಯಾಗೆ ಕರೆದೊಯ್ಯುವ ಭರವಸೆ ನೀಡಿದ್ದಾನೆ. ಇದಕ್ಕೆ ಬೇಕಾದ ವೀಸಾ ವ್ಯವಸ್ಥೆಗಳನ್ನು ಕೂಡ ‘ಮ್ಯಾಡ್ ಮುಲ್ಲಾ’ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಸುಡಾನ್ ಅಧಿಕಾರಿಗಳು ಫಕೀರ್ ನ ಸಂಶಯಾಸ್ಪದ ನಡವಳಿಕೆ ಕಂಡು ಭಾರತಕ್ಕೆ ಗಡಿಪಾರು ಮಾಡಿದ್ದಾರೆ.
ಇಲ್ಲಿಯವರೆಗೂ ಎನ್ ಐ ಎ ಸುಮಾರು ೬೦ ಭಾರತೀಯರನ್ನು ಭಯೋತ್ಪಾದಕ ಸಂಘಟನೆಗೆ ಸೇರಲು ತಡೆಯಲು ಸಾಧ್ಯವಾಗಿದ್ದು, ಇದೇ ಮೊದಲ ಘಟನೆಯಲ್ಲಿ ಐಸಿಸ್ ಲಿಬಿಯಾಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕೂಡ ತಡೆದಿದೆ.