ರಾಷ್ಟ್ರೀಯ

ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ: ರಾಮ್‌ದೇವ್ ಕಂಪೆನಿಗೆ ನೋಟಿಸ್

Pinterest LinkedIn Tumblr

Ramdev_

ಹೊಸದಿಲ್ಲಿ, ಡಿ.12: ಗೋಧಿ ಹಿಟ್ಟಿನ ನೂಡಲ್‌ಗಳ ತಯಾರಿಕೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಸೇರಿದಂತೆ, ಎರಡು ಆಯುರ್ವೇದ ಉತ್ಪನ್ನಗಳ ಕಂಪೆನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ತಿಳಿಸಿದ್ದಾರೆ.

‘ಪತಂಜಲಿ ಆಯುರ್ವೇದ ಲಿ. ಹಾಗೂ ಮೆ. ಆಕಾಶ್ ಯೋಗ ಹೆಲ್ತ್ ಪ್ರಾಡಕ್ಟ್ಸ್ ಪ್ರೈ. ಲಿಮಿಟೆಡ್‌ಗೆ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ವು ನವೆಂಬರ್ 19ರಂದು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಕೂಡದು ಎಂದು ಅವುಗಳನ್ನು ಕೇಳಲಾಗಿದೆಯೆಂದು ನಡ್ಡಾ, ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.

ತನ್ನ ನೂಡಲ್ ಉತ್ಪನ್ನಗಳು,ಗ್ರಾಹಕರಿಗೆ ಲಭ್ಯವಿರುವ ಇತರ ಇನ್‌ಸ್ಟಂಟ್ ನೂಡಲ್ ಉತ್ಪನ್ನಗಳಿಗಿಂತ ಹೆಚ್ಚು ಆರೋಗ್ಯಕರ ಹಾಗೂ ಮಿತದರದ್ದು ಎಂಬುದಾಗಿ ಬಿಂಬಿಸಿ, ಬಾಬಾ ರಾಮ್‌ದೇವ್ ಅವರು ಪತಂಜಲಿ ನೂಡಲ್ಸ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರು.

ಮೊನೊಸೋಡಿಯಂ ಗ್ಲುಟಾಮೈಟ್ ಹಾಗೂ ಸೀಸದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನೆಸ್ಲೆ ಕಂಪೆನಿಯ ಜನಪ್ರಿಯ ನೂಡಲ್ ಉತ್ಪನ್ನ ಮ್ಯಾಗಿಯನ್ನು ಈ ವರ್ಷದ ಆರಂಭದಲ್ಲಿ ನಿಷೇಧಿಸಲಾಗಿತ್ತು.

Write A Comment