ರಾಷ್ಟ್ರೀಯ

ದಿಲ್ಲಿಯಲ್ಲಿ ಇನ್ನು ಮುಂದೆ ಡೀಸೆಲ್ ವಾಹನಗಳ ಖರೀದಿಸುವಂತಿಲ್ಲ ..!

Pinterest LinkedIn Tumblr

traffic

ಹೊಸದಿಲ್ಲಿ,ಡಿ.12: ದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿರಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ತಮ್ಮ ಇಲಾಖೆಗಳಿಗೆ ಡೀಸೆಲ್ ವಾಹನಗಳನ್ನು ಖರೀದಿಸದಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ನಿರ್ದೇಶಿಸಿದ್ದು, 10 ವರ್ಷಗಳ ಹಳೆಯ ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆಯೂ ಸೂಚಿಸಿದೆ. ಎನ್‌ಜಿಟಿಯ ಈ ಆದೇಶವು ಡೀಸೆಲ್ ವಾಹನಗಳನ್ನು ಖರೀದಿಸುವ ಖಾಸಗಿ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.

ಎನ್‌ಜಿಟಿಯು ಗುರುವಾರ ದಿಲ್ಲಿ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದು, ದಿಲ್ಲಿಯಲ್ಲಿ ಡೀಸೆಲ್ ವಾಹನಗಳ ಮಾರಾಟ ಹೆಚ್ಚುತ್ತಿರುವುದನ್ನು ಅದು ಬೆಟ್ಟು ಮಾಡಿದೆ. 2013ನೆ ಸಾಲಿಗೆ ಹೋಲಿಸಿದರೆ 2014ರಲ್ಲಿ ಸಾರಿಗೆ ಇಲಾಖೆಯು 6,748 ಅಧಿಕ ಡೀಸೆಲ್ ವಾಹನಗಳ ನೋಂದಾವಣೆ ಮಾಡಿರುವುದನ್ನು ವರದಿಯು ಬೆಳಕಿಗೆ ತಂದಿದೆ. 2015ನೆ ಸಾಲಿನ ಮೊದಲ ಐದು ತಿಂಗಳುಗಳಲ್ಲಿ 34,261ಡೀಸೆಲ್ ವಾಹನಗಳು ನೋಂದಣಿಯಾಗಿದ್ದು,ಇದು 2014ನೆ ಸಾಲಿನಲ್ಲಿ ನೋಂದಣಿಯಾಗಿದ್ದ ಒಟ್ಟು ವಾಹನಗಳ ಶೇ.40ರಷ್ಟು ಅಧಿಕವಾಗಿದೆ.

ಭಾರತದಲ್ಲಿ ಡೀಸೆಲ್ ವಾಹನಗಳ ಪಾಲು 2013ರಲ್ಲಿ ಶೇ.47ಕ್ಕೇರಿದ್ದು, 2015ರಲ್ಲಿ ಇದು ಶೇ.37ಕ್ಕೆ ತಗ್ಗಿದೆ ಎಂದು ಕೇಂದ್ರವು ಮಂಗಳವಾರ ಎನ್‌ಜಿಟಿಗೆ ಸಲ್ಲಿಸಿದ ತನ್ನ ಟಿಪ್ಪಣಿಯಲ್ಲಿ ತಿಳಿಸಿತ್ತು.

ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಇತ್ತೀಚಿನ ವಾರಗಳಲ್ಲಿ ವಾಯು ಮಾಲಿನ್ಯದ ಮಟ್ಟ ತಾರಕಕ್ಕೇರಿದೆ. ಚಳಿಗಾಲ ಕಾಲಿಟ್ಟಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.

Write A Comment