ರಾಷ್ಟ್ರೀಯ

ಹಿಂದೂ ಗೆಳೆಯನ ಮರಣ ನಂತರ ಆತನ ಮಕ್ಕಳನ್ನು ದತ್ತು ಪಡೆದ ಮುಸ್ಲಿಂ ದಂಪತಿ

Pinterest LinkedIn Tumblr

Mohd_Shahnawaz_Zaheer

ದೇಶದಲ್ಲಿ ಅಸಹಿಷ್ಣುತೆ, ಕೋಮು ಸಂಘರ್ಷ ಹೆಚ್ಚುತ್ತಿದೆ ಎಂದು ಬೊಬ್ಬೆ ಹಾಕುವಾಗ ಮಾನವೀಯತೆಯೇ ಮಹಾನ್ ಧರ್ಮ ಎಂದು ಜಗತ್ತಿಗೆ ತೋರಿಸುವ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ.

ಈತನ ಹೆಸರು ಮೊಹಮ್ಮದ್ ಶಹನವಾಜ್ ಜಹೀರ್, ಉದ್ಯೋಗ ಪೈಲಟ್. ಪ್ರವೀಣ್ ದಯಾಳ್ ಎಂಬ ಇನ್ನೊಬ್ಬ ಪೈಲಟ್ ಈತನ ಆಪ್ತ ಮಿತ್ರನಾಗಿದ್ದನು. 2012ರಲ್ಲಿ ದಯಾಳ್ ಮತ್ತು ಗಗನಸಖಿಯಾಗಿದ್ದ ಆತನ ಪತ್ನಿ ಕವಿತಾ ದಯಾಳ್ ಇಹಲೋಕ ತ್ಯಜಿಸಿದ್ದರು. ಅದಕ್ಕಿಂತ ಮುನ್ನ ತನಗೇನಾದರೂ ಅನಾಹುತವಾದರೆ ನನ್ನ ಅವಳಿ ಮಕ್ಕಳನ್ನು ನೋಡಿಕೊಳ್ಳಬೇಕು ಎಂದು ದಯಾಳ್ ಜಹೀರ್‌ನಿಂದ ಮಾತು ತೆಗೆದುಕೊಂಡಿದ್ದನು. ದಯಾಳ್ ಮರಣಾನಂತರ ಆತನ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಜಹೀರ್ ಹೆಗಲ ಮೇಲಿತ್ತು. ಆದರೇನು ಮಾಡುವುದು? ದಯಾಳ್ ಸಂಬಂಧಿಕರು ಜಹೀರ್ ದಯಾಳ್‌ನ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಕಣ್ಣಿಟ್ಟುಕೊಂಡೇ ಮಕ್ಕಳನ್ನು ಸಲಹಲು ಮುಂದಾಗಿದ್ದಾನೆ ಎಂದು ಆರೋಪ ಮಾಡತೊಡಗಿದರು. ಹೀಗಿರುವಾಗ ತನ್ನ ಗೆಳೆಯನ ಮಕ್ಕಳನ್ನು ಅರ್ಧದಲ್ಲಿ ಕೈ ಬಿಡುವಂತಿಲ್ಲ. ಅದೇನೋ ದಯಾಳ್ ಚಾಲಕ ಒಂದಷ್ಟು ದಿನ ಮಕ್ಕಳನ್ನು ಆರೈಕೆ ಮಾಡಿದ. ಮುಂದೇನು? ಎಂದು ಯೋಚಿಸಿದಾಗ ಹೊಳೆದದ್ದು ದತ್ತು ಸ್ವೀಕಾರ!

ಅಂದ ಹಾಗೆ ದತ್ತು ಸ್ವೀಕಾರ ಅಷ್ಟು ಸುಲಭವಲ್ಲ. ಅನ್ಯ ಧರ್ಮೀಯರು ದತ್ತು ಪಡೆವ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಕಾನೂನಿನ ಮೊರೆ ಹೋಗಬೇಕಾಯಿತು. ತನ್ನ ಕೆಲಸದ ಒತ್ತಡದ ನಡುವೆ ಬೇರೆ ಮನೆಯಲ್ಲಿರುವ ಗೆಳೆಯನ ಮಕ್ಕಳತ್ತ ಗಮನ ಹರಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೆತ್ತವರ ನೆರಳಿಲ್ಲದ ಮಕ್ಕಳು ಕಷ್ಟ ಅನುಭವಿಸುತ್ತಿರುವುದನ್ನು ನೋಡಲಾಗದೆ ಜಹೀರ್ ಗಾರ್ಡಿಯನ್‌ಶಿಪ್ ಕಾಯ್ದೆಯಡಿಯಲ್ಲಿ ತನಗೆ ದಯಾಳ್ ಮಕ್ಕಳ ಪೋಷಕನ ಸ್ಥಾನ ನೀಡಬೇಕೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಜಹೀರ್ ತನ್ನ ಗೆಳೆಯನಿಗೆ ಕೊಟ್ಟ ಮಾತನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಅನಾರೋಗ್ಯ ಪೀಡಿತನಾಗಿದ್ದ ಪ್ರವೀಣ್ ದಯಾಳ್, ಸಾವಿಗೆ ಮುನ್ನ ಮಕ್ಕಳ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದನು ಎಂದು ಹೇಳಿದರು. ಅದೇ ವೇಳೆ ಮಕ್ಕಳು ಜಹೀರ್ ಕುಟುಂಬದಲ್ಲಿ ಸುರಕ್ಷಿತರಾಗಿರುತ್ತಾರೆ ಎಂದು ದಯಾಳ್ ಸಹೋದರ ಕೂಡಾ ಹೇಳಿಕೆ ನೀಡಿದರು. ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಾದಾಗ ನ್ಯಾಯಾಲಯ ಜಹೀರ್ ಅರ್ಜಿಯನ್ನು ಪರಿಗಣಿಸಿತು.

ಹೀಗಿರುವಾಗ ಮುಖ್ಯನ್ಯಾಯಧೀಶ ನಜ್ಮಿ ವಾಜಿರಿಯವರು ಈ ಅವಳಿ ಮಕ್ಕಳ ಹೆಸರಲ್ಲಿ ಟ್ರಸ್ಟ್‌ವೊಂದನ್ನು ಸ್ಥಾಪಿಸಿದರು. ಕಮರ್ಷಿಯಲ್ ಪೈಲಟ್‌ಗಳ ಸಂಘ ಮತ್ತು ಇನ್ನಿತರರು ಸೇರಿ ರು. 1 ಕೋಟಿಗಿಂತಲೂ ಹೆಚ್ಚು ದೇಣಿಗೆಯನ್ನು ಈ ಟ್ರಸ್ಟ್‌ಗೆ ಕೊಟ್ಟಿದ್ದಾರೆ.
ಇಷ್ಟಿದ್ದರೆ ಸಾಕೆ? ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ದತ್ತು ತೆಗೆದುಕೊಳ್ಳಬೇಕು ಎಂಜು ಜಹೀರ್‌ಗೆ ಅನಿಸುತ್ತಲೇ ಇತ್ತು. ತಡ ಮಾಡದೆ ಅವರು ಯೋಗೇಶ್ ಜಗಿಯಾ ಎಂಬ ವಕೀಲರನ್ನು ಭೇಟಿ ಮಾಡಿ ಕಾನೂನಿನ ಮೆಟ್ಟಲು ಹತ್ತಿದ್ದರು.

ಅನ್ಯ ಧರ್ಮದವರಿಗೆ ಮಕ್ಕಳನ್ನು ದತ್ತು ಕೊಡುವುದಕ್ಕಾಗಿ ಯೋಗೇಶ್ ಯಾವುದೇ ರೀತಿಯ ಶುಲ್ಕ ತೆಗೆದುಕೊಳ್ಳದೆ ಕಾನೂನು ಹೋರಾಟ ಮಾಡಿದರು. ನ್ಯಾಯಾಲಯ ಜಹೀರ್ ಪರವಾಗಿ ತೀರ್ಪು ನೀಡಿ ದತ್ತು ಸ್ವೀಕಾರಕ್ಕೆ ಜೈ ಎಂದಿತು.

ಇದೀಗ ದಯಾಳ್ ಅವರ ಮಕ್ಕಳಾದ ಆಯುಶ್ ಮತ್ತು ಪ್ರಾರ್ಥನಾಳನ್ನು ಸಲಹುವ ಹೊಣೆ ಜಹೀರ್‌ಗಿದೆ. ತನ್ನ ಮಕ್ಕಳಂತೆಯೇ ಜಹೀರ್ ತನ್ನ ಗೆಳೆಯನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ದೆಹಲಿಯ ಪ್ರತಿಷ್ಠಿತ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಇಬ್ಬರು ಮಕ್ಕಳು ಕಲಿಯುತ್ತಿದ್ದು ಆಯುಷ್‌ಗೆ ಪೈಲಟ್ ಆಗಬೇಕೆಂಬ ಆಸೆಯಿದೆ. ಡಿಸೈನರ್ ಆಗಬೇಕೆಂಬ ಕನಸು ಪ್ರಾರ್ಥನಾಳದ್ದು. ನ್ಯಾಯಾಲಯದ ಆದೇಶದಂತೆ ಜಹೀರ್‌ಗೆ ಈ ಮಕ್ಕಳನ್ನು ಸಲಹುವ ಹೊಣೆ ಮಾತ್ರ ನೀಡಲಾಗಿದೆ. ಮಕ್ಕಳ ಹೆಸರಿನಲ್ಲಿರುವ ಆಸ್ತಿಯಾಗಲೀ, ಆಯುಷ್ ಪ್ರಾರ್ಥನಾ ಬೆನೆವೋಲೆಂಟ್ ಟ್ರಸ್ಟ್‌ನ ದುಡ್ಡನ್ನಾಗಲೀ ಜಹೀರ್ ಮುಟ್ಟುವಂತಿಲ್ಲ. ಟ್ರಸ್ಟ್ ನ ಹಣ ಆಯುಷ್ ಮತ್ತು ಪ್ರಾರ್ಥನಾಳಿಗೆ 25 ವರ್ಷವಾದಾಗ ಸಿಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಆಯುಷ್ ಮತ್ತು ಪ್ರಾರ್ಥನಾ ಜಹೀರ್ ಕುಟುಂಬದ ಜತೆ ಸುಖವಾಗಿದ್ದಾರೆ. ಈ ಮಕ್ಕಳನ್ನು ಹಿಂದೂವಾಗಿಯೇ ಬೆಳೆಸುತ್ತೇವೆ ಅಂತಾರೆ ಜಹೀರ್ ದಂಪತಿ. ಈಗ ಗೆಳೆಯನಿಗೆ ನೀಡಿದ ಮಾತನ್ನು ಉಳಿಸಿಕೊಂಡಿದ್ದೇನೆ ಎಂಬ ಸಂತೃಪ್ತಿಯ ನಗು ಜಹೀರ್‌ನ ಮುಖದಲ್ಲಿ ಕಾಣಬಹುದು.
ದಯಾಳ್ ಮತ್ತು ಜಹೀರ್‌ನ ಈ ಗೆಳೆತನಕ್ಕೆ ಸಲಾಂ…

Write A Comment