ರಾಷ್ಟ್ರೀಯ

ದೇಶಭಕ್ತಿಯ ಪ್ರಮಾಣಪತ್ರ ಬೇಕಿಲ್ಲ: ಪ್ರಧಾನಿ ಮೋದಿ

Pinterest LinkedIn Tumblr

narendra-modiನವದೆಹಲಿ: ಸಂಸತ್‍ನ ಚಳಿಗಾಲದ ಅಧಿವೇಶನದಲ್ಲಿ 2 ದಿನಗಳಿಂದ ನಡೆಯುತ್ತಿರುವ ಅಸಹಿಷ್ಣುತೆ ಬಗೆಗಿನ ಚರ್ಚೆಯ ಕಾವನ್ನು ತಣಿಸುವ ಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಹಾಕಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ಗಂಭೀರ ಹಾಗೂ ಅರ್ಥಪೂರ್ಣ ಮಾತುಗಳನ್ನಾಡಿರುವ ಪ್ರಧಾನಿ ಮೋದಿ, ‘125 ಕೋಟಿ ಭಾರತೀಯರ ಪೈಕಿ ಒಬ್ಬರೇ ಒಬ್ಬರ ದೇಶಭಕ್ತಿ ಬಗ್ಗೆ ಯಾರೂ ಪ್ರಶ್ನೆಯೆತ್ತುವಂತಿಲ್ಲ. ಯಾರು ಕೂಡ ದೇಶಭಕ್ತಿಯ ಪ್ರಮಾಣಪತ್ರವನ್ನೂ ನೀಡಬೇಕಿಲ್ಲ” ಎಂದಿದ್ದಾರೆ. ‘ಅಸಹಿಷ್ಣುತೆ ಇದೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ’ ಎಂಬ ಮಾತುಗಳು ಅವರ ಸಂಪುಟ ಸಹೋ ದ್ಯೋಗಿ-ಗಳಿಂದಲೇ ಕೇಳಿಬಂದಿರುವ ಹಿನ್ನೆಲೆ ಯಲ್ಲಿ ಪ್ರಧಾನಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ.

ರಾಜ್ಯಸಭೆಯಲ್ಲಿ ಸಂವಿಧಾನಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡ ಪ್ರಧಾನಿ ಮತ್ತೊಮ್ಮೆ ಏಕತೆಯ ಮಂತ್ರವನ್ನು ಪಠಿಸಿದ್ದಾರೆ. ಭಾರತದಂತಹ ದೇಶದಲ್ಲಿ ಜನರನ್ನು ವಿಭಜಿಸುವ ಘಟನೆಗಳು ಎಷ್ಟೋ ನಡೆದಿರಬಹುದು. ಆದರೆ, ನಾವು ಜನರನ್ನು ಒಗ್ಗೂಡಿಸುವ ಕಾರಣಗಳತ್ತ ನೋಡಬೇಕು ಎಂದಿದ್ದಾರೆ.

ಪ್ರೀತಿಯಲ್ಲಿದೆ ಅಗಾಧ ಶಕ್ತಿ: ಅಸಹಿಷ್ಣುತೆಗೆ ಸಂಬಂಧಿಸಿದ 40 ನಿಮಿಷಗಳ ಪ್ರತಿಕ್ರಿಯೆಯಲ್ಲಿ ಮೋದಿ, ದಾದ್ರಿ ಘಟನೆಯ ಬಗ್ಗೆ ನೇರ ವಾಗಿ ಉಲ್ಲೇಖಿಸದಿದ್ದರೂ, ‘ದೌರ್ಜನ್ಯದಂತಹ ಯಾವುದೇ ಘಟನೆಯೂ ನಮ್ಮ ಸಮಾಜಕ್ಕೆ ಕಪ್ಪುಚುಕ್ಕೆಯಿದ್ದಂತೆ. ಏಕತೆ ಮತ್ತು ಸೌಹಾರ್ದತೆಯೇ ದೇಶವನ್ನು ಮುನ್ನಡೆಸುವ ಏಕೈಕ ಮಾರ್ಗ. ಎಲ್ಲರ ನೋವನ್ನೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಮುಂದೆ ಅಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸಮಾನತೆ ಮತ್ತು ಪ್ರೀತಿಯಲ್ಲಿ ಅಗಾಧ ಶಕ್ತಿಯಿದೆ. ನಮ್ಮಲ್ಲಿರುವ ಈ ಶಕ್ತಿಯನ್ನುಅರಿತುಕೊಳ್ಳಬೇಕು” ಎಂದರು. ಪ್ರಸ್ತಾವಿತ ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ‘ನೀನು ನೀನು, ನಾನು ನಾನು ಎಂಬುದರಿಂದ ದೇಶ ಮುಂದೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರನ್ನೂ ಒಗ್ಗೂಡಿಸುವ ಈ ಯೋಜನೆ ರೂಪಿಸಲು ಮುಂದಾಗಿದ್ದೇನೆ. ಇಲ್ಲಿ ಒಂದು ರಾಜ್ಯ ಮತ್ತೊಂದು ರಾಜ್ಯದ ವಾರ್ಷಿಕ ಉತ್ಸವವನ್ನು ಆಚರಿಸುವ, ಅಲ್ಲಿನ ಭಾಷೆಯನ್ನು ಕಲಿಯುವ ಮತ್ತಿತರ ಯೋಚನೆಗಳನ್ನು ಸೇರಿಸಲು ಇಚ್ಛಿಸಿದ್ದೇನೆ” ಎಂದರು.

ರಾಜ್ಯಸಭೆಗೆ ಹೆಚ್ಚಿನ ಮಹತ್ವ: ಏತನ್ಮಧ್ಯೆ, ರಾಜ್ಯ ಸಭೆಯಲ್ಲಿ ಹೆಚ್ಚಿನ ವಿಧೇಯಕಗಳು ಅಂಗೀಕಾರಗೊಳ್ಳದೇ ಬಾಕಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸದಸ್ಯರ ಮನವೊಲಿಸುವ ಯತ್ನವನ್ನೂ ಮೋದಿ ಮಾಡಿದ್ದಾರೆ. ಹಿರಿಯರ ಮನೆಯಾದ ರಾಜ್ಯಸಭೆಗೆ ನಾನು ಹೆಚ್ಚಿನ ಮಹತ್ವ ನೀಡುತ್ತೇನೆ. ಹಿರಿಯರಿಲ್ಲದ ಜಾಗದಲ್ಲಿ ಯಾವುದೇ ಚರ್ಚೆ ನಡೆಯಲು ಸಾಧ್ಯವಿಲ್ಲ. ರಾಜ್ಯಸಭೆ ತನ್ನದೇ ಆದ ವಿಶಿಷ್ಟ ಪಾತ್ರವನ್ನು ನಿಭಾಯಿಸುತ್ತದೆ ಎಂದಿದ್ದಾರೆ.

ದೂರದೃಷ್ಟಿಯ ಸಂವಿಧಾನ ನಮ್ಮದು: ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದ ಗೋಪಾಲಸ್ವಾಮಿ ಅಯ್ಯಂಗಾರ್ ಅವರ ಮಾತುಗಳನ್ನು ಪ್ರಸ್ತಾಪಿಸಿದ ಮೋದಿ, ‘ರಾಜ್ಯಸಭೆಯು ಎಂದಿಗೂ ಕಾನೂನು ಜಾರಿಯ ಹಾದಿಗೆ ಅಡ್ಡಿಯಾಗಬಾರದು. ರಾಜ್ಯಸಭೆಗೆ ಇನ್ನೊಬ್ಬ ದೊಡ್ಡ ಮಾರ್ಗದರ್ಶಕ ಇರಬಾರದು” ಎಂದರು. ಸಂವಿಧಾನ ರಚನೆಯಲ್ಲಿ ಭಾಗಿಯಾಗಿದ್ದವರು ಕಾಂಗ್ರೆಸ್‍ಗೆ ಹತ್ತಿರವಾದವರೇ ಆಗಿದ್ದರು. ಇದನ್ನು ನಾವು ಸಕಾರಾತ್ಮಕವಾಗಿ ನೋಡಬೇಕು. ಎರಡೂ ಸದನಗಳ ನಡುವೆ ಸೌಹಾರ್ದತೆಗೆ ಇದ್ದರಷ್ಟೇ ಸಂವಿಧಾನವು ಪರಿಣಾಮಕಾರಿಯಾಗಬಲ್ಲದು ಎಂದು ಸ್ವತಃ ನೆಹರೂ ಅವರೇ ನುಡಿದಿದ್ದರು. ನಮ್ಮ ಸಂವಿಧಾನವು ಕೇವಲ ಕಾನೂನುಗಳಿಗೆ ಸಂಬಂಧಿಸಿದ್ದಲ್ಲ. ಇದೊಂದು ಸಾಮಾಜಿಕ ದಾಖಲೆ. ಇದನ್ನು ನಾವು ಶ್ಲಾಘಿಸಬೇಕು. ಸಂವಿಧಾನವು ಒಂದು ಆಚರಣೆಯಾಗಬೇಕು, ಅದರ ಸಂದೇಶವನ್ನು ಭವಿಷ್ಯದ ತಲೆಮಾರಿಗೆ ತಲುಪಬೇಕು ಎಂದೂ ಹೇಳಿದರು ಮೋದಿ. ಈ ಮನೆಯನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದು ಮುಖ್ಯ. ಏಕೆಂದರೆ, ಇಡೀ ದೇಶವೇ ನಮ್ಮತ್ತ ನೋಡುತ್ತಿದೆ ಎಂದೂ ಹೇಳಿದರು ಮೋದಿ. ಸಂವಿಧಾನ ರಚನೆಯ ವೇಳೆಯೇ ವಿಭಿನ್ನ ದೃಷ್ಟಿಕೋನಗಳಿದ್ದವು. ಅಂದಿನ ಅವರ ಆಲೋಚನೆಗಳು 50 ವರ್ಷಗಳ ಬಳಿಕವೂ, ಅಂದರೆ ಇಂದಿಗೂ ಸರಿಹೊಂದುವಂಥದ್ದು. ನಮ್ಮ ಇಂದಿನ ಯುವಜನರು ಹಿರಿಯರು ಮಾಡಿದ ತಪ್ಪುಗಳನ್ನು ಕಳೆದು, ಸಾಮಾಜಿಕ ನ್ಯಾಯದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು ಎಂದೂ ಹೇಳಿದ್ದಾರೆ ಮೋದಿ.

Write A Comment