ಅಂತರಾಷ್ಟ್ರೀಯ

ಭಾರತದ ಮೇಲೆ ದಾಳಿಗೆ ಪಾಕ್ ನ ಉಗ್ರ ಸಂಘಟನೆಗಳ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

Pinterest LinkedIn Tumblr

terror

ನವದೆಹಲಿ: ಭಾರತದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದಕ್ಕೆ ಪಾಕಿಸ್ತಾನ ಲಷ್ಕರ್-ಎ- ತೊಯ್ಬಾ, ಜೈಶ್- ಇ- ಮೊಹಮ್ಮದ್(ಜೆಇಎಂ) ಹಾಗೂ ಹಿಜಬ್-ಉಲ್- ಮುಜಾಹಿದ್ದೀನ್(ಹೆಚ್ ಯುಎಂ) ಉಗ್ರ ಸಂಘಟನೆಗಳೊಂದಿಗೆ ಮೈತ್ರಿ ಮಾಡಿಕೊಂಡು ಒಳಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತದ ನೆಲದಲ್ಲಿ ಈ ಮೂರು ಉಗ್ರ ಸಂಘಟನೆಗಳ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಂಚು ರೂಪಿಸಿದೆ. ಉನ್ನತ-ತರಬೇತಿ ಪಡೆದಿರುವ ಸುಮಾರು 30 ಉಗ್ರರನ್ನು ಪೇಷಾವರದಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆತರಲಾಗಿದ್ದು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಮೂರೂ ಉಗ್ರ ಸಂಘಟನೆಗಳು ಜೊತೆಗೂಡಿ ಭಾರತದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದು, ಮೂಲಸೌಕರ್ಯ, ಸ್ವತ್ತುಗಳನ್ನು, ಸ್ಲೀಪರ್ ಸೆಲ್ ಗಳನ್ನು ಹಂಚಿಕೊಳ್ಳಲಿದ್ದು, ಇದಕ್ಕೆ ಪಾಕ್ ನ ಐಎಸ್ಐ ಸಮನ್ವಯ ವಹಿಸಲಿದೆ. ಉಗ್ರ ಸಂಘಟನೆಗಳ ನಡುವೆ ಒಗ್ಗಟ್ಟು ಮೂಡಿಸಲು ಇತ್ತೀಚೆಗಷ್ಟೇ ಐಎಸ್ಐ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಕಾಶ್ಮೀರದ ನಿಯಂತ್ರಣ ರೇಖೆ ಸಮೀಪದ ತಂಗಧರ್ ಪ್ರದೇಶದಲ್ಲಿರುವ ಸೇನಾ ಕ್ಯಾಂಪ್ ಮೇಲೆ ನ.26 ರಂದು ಉಗ್ರರು ದಾಳಿ ನಡೆಸಿದ್ದಾರೆ.

ಉಗ್ರರು ಸಾರ್ವಜನಿಕ ಸ್ಥಳ, ಪ್ರವಾಸಿ ತಾಣ, ಸಾಂಪ್ರದಾಯಿಕ ಕಟ್ಟಡಗಳು, ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಉಗ್ರರ ದಾಳಿಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

Write A Comment