ನವದೆಹಲಿ: ದಾದ್ರಿ ಘಟನೆಯು ದೇಶಾದ್ಯಂತ ವಿವಾದವೆಬ್ಬಿಸಿರುವ ನಡುವೆಯೇ ಇಂಫಾಲ್‍ನಲ್ಲಿ ಕರು ಕದ್ದಿದ್ದಾರೆಂಬ ಆರೋಪದಲ್ಲಿ ಮದರಸಾದ ಹೆಡ್‍ಮಾಸ್ಟರ್‍ವೊಬ್ಬರನ್ನು ಹತ್ಯೆಗೈದ ಆಘಾತಕಾರಿ ಘಟನೆ ವರದಿಯಾಗಿದೆ.
ಮದರಸಾದ ಮುಖ್ಯಶಿಕ್ಷಕ ಮೊಹಮ್ಮದ್ ಹಸ್ಮದ್ ಅಲಿ(55) ಅವರ ಮೃತದೇಹವು ಕೈರಾವೋ ಮಕೇಟಿಂಗ್ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಗ್ರಾಮದ ಶೆಡ್‍ವೊಂದರಲ್ಲಿ 2 ದಿನಗಳ ಹಿಂದೆ ಕರುವೊಂದು ಕಾಣೆಯಾಗಿತ್ತು. ಇದರ ಬೆನ್ನಲ್ಲೇ ಹಸ್ಮದ್ ಅಲಿ ಅವರು ಕರುವೊಂದನ್ನು ಹಿಡಿದುಕೊಂಡು ಸಾಗುತ್ತಿರುವುದನ್ನು ನೋಡಿದ ಗುಂಪೊಂದು, ಅಲಿ ಅವರ ಮೇಲೆ ಗಂಭೀರ ಹಲ್ಲೆ ನಡೆಸಿ ಕೊಂದು ಹಾಕಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲಿ ಅವರ ಮೃತದೇಹವು ಅವರ ಮನೆಯಿಂದ 5 ಕಿ.ಮೀ. ದೂರದಲ್ಲಿ ಪತ್ತೆಯಾಗಿದ್ದು, ಈ ಘಟನೆಯು ಮಣಿಪುರದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಕೈರಾವೋ ಉದ್ವಿಗ್ನ: ಘಟನೆಯು ಬೆಳಕಿಗೆ ಬರುತ್ತಿದ್ದಂತೆ, ಕೈರಾವೋ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವವರೆಗೂ ಮೃತ ಅಲಿ ಅವರ ಅಂತ್ಯಸಂಸ್ಕಾರ ಮಾಡುವುದಿಲ್ಲ ಮುಸ್ಲಿಂ ಸಂಘಟನೆಯೊಂದು ಪಟ್ಟು ಹಿಡಿದು ಕುಳಿತಿದೆ. ಅಲ್ಲದೆ, ಗುರುವಾರ ರಾಜ್ಯವ್ಯಾಪಿ ಬಂದ್‍ಗೂ ಕರೆ ನೀಡಿದೆ. `ಅಲಿ ಅವರು ತುಂಬಾ ಮೃದು ಸ್ವಭಾವದ, ಪ್ರಾಮಾಣಿಕ ಶಿಕ್ಷಕರು. ಅವರನ್ನು ಮಾಡದ ತಪ್ಪಿಗಾಗಿ ಕೊಲ್ಲಲಾಗಿದೆ.
ಕೃತ್ಯ ಎಸಗಿದವರು ಯಾರೆಂದು ಪೊಲೀಸರಿಗೆ ಗೊತ್ತಿದೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ನ್ಯಾಯ ಸಿಗುವವರೆಗೂ ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ’ ಎಂದು ಅಲಿ ಕೊಲೆಗೆ ಸಂಬಂಧಿಸಿದ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಮೊಹಮ್ಮದ್ ರಜಾವುದ್ದೀನ್ ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
