ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಕಡೆಯಿಂದ ಬೆದರಿಕೆ ಬಂದಿದ್ದರಿಂದ ತನ್ನ ಬಂಧನವಾಗಿದೆ ಎಂಬ ವರದಿಯನ್ನು ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ತಳ್ಳಿ ಹಾಕಿದ್ದಾನೆ.
”ನನಗೆ ಯಾರ ಭಯವೂ ಇಲ್ಲ” ಎಂದು ಛೋಟಾ ರಾಜನ್ ಸುದ್ದಿ ವಾಹಿನಿಗಳ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ. ಆತನನ್ನು ಇಂಡೋನೇಷ್ಯಾದ ಬಾಲಿ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿರಿಸಲಾಗಿದ್ದು, ಈಗ ವಿಚಾರಣೆ ನಡೆಯುತ್ತಿದೆ.
ಬಾಲಿ ಪೊಲೀಸ್ ಕಮಿಷನರ್ ರೈನಾರ್ಡ್ ನೈನ್ಗೊಲನ್ ಮಾಧ್ಯಮದೊಂದಿಗೆ ಮಾತನಾಡಿ, ತನಗೆ ಭಾರತಕ್ಕೆ ಹೋಗಲು ಇಚ್ಛೆಯಿಲ್ಲ ಎಂದು ಛೋಟಾ ರಾಜನ್ ಹೇಳಿದ್ದ ಮತ್ತು ನನ್ನನ್ನು ಬಿಡುಗಡೆ ಮಾಡಿ, ನನಗೆ ಜಿಂಬಾಬ್ವೆಗೆ ಹೋಗಬೇಕು ಎಂದು ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.
ಛೋಟಾ ರಾಜನ್ ಬಗ್ಗೆ ವರದಿ ಮಾಡಿರುವ ಇನ್ನೊಂದು ಪತ್ರಿಕೆ, ಆತನ ಸಹಚರನಾಗಿರುವ ದೆಹಲಿ ಮೂಲದ ವಿಕಿ ಮಲ್ಹೋತ್ರಾ, ಛೋಟಾ ರಾಜನ್ ನ ಎಲ್ಲಾ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದು, ದಾವೂದ್ ಇಬ್ರಾಹಿಂ ಮೇಲೆಯೂ ಕಣ್ಣಿಟ್ಟಿದ್ದಾನೆ ಎಂದು ಹೇಳಿದೆ. ವಿಕಿ ಮಲ್ಹೋತ್ರಾ 2005ರಲ್ಲಿ ಬಂಧಿತನಾಗಿದ್ದ, ಆದರೆ 5 ವರ್ಷಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ.
ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳ ಸಾಗಣೆಯಲ್ಲದೆ ಅನೇಕ ಕೊಲೆ ಆರೋಪಗಳೂ ಭಾರತದಲ್ಲಿ ಛೋಟಾ ರಾಜನ್ ಮೇಲಿದೆ. ಛೋಟಾ ರಾಜನ್ ನನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಇಂಡೋನೇಷ್ಯಾದಲ್ಲಿ ಈಗಾಗಲೇ ಚಾಲನೆ ಸಿಕ್ಕಿದೆ. ಸಿಬಿಐ ಅಧಿಕಾರಿಗಳ ತಂಡ ಇನ್ನೆರಡು ದಿನಗಳೊಳಗೆ ಬಾಲಿಗೆ ತೆರಳಿ ಕರೆತರುವ ಸಾಧ್ಯತೆಯಿದೆ. ಭದ್ರತಾ ಕಾರಣಗಳಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ಭಾರತ ಮತ್ತು ಇಂಡೋನೇಷ್ಯಾದ ಕಾನೂನುಗಳು ಭಿನ್ನವಾಗಿದ್ದು, ಅವುಗಳನ್ನು ಪರಿಶೀಲಿಸಿ ಛೋಟಾ ರಾಜನ್ ನನ್ನು ಕರೆತರಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಿಂದ ಇಂಡೋನೇಷ್ಯಾಕ್ಕೆ ವಿಮಾನದಲ್ಲಿ ಪಾಸ್ ಪೋರ್ಟ್ ಸಂಖ್ಯೆ ಜಿ 9273860 ಮೋಹನ್ ಕುಮಾರ್ ಹೆಸರಿನಲ್ಲಿ ಪ್ರಯಾಣಿಸುತ್ತಿದ್ದ ಛೋಟಾ ರಾಜನ್ ನನ್ನು ಮೊನ್ನೆ ಭಾನುವಾರ ಬಾಲಿ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸೆರೆ ಹಿಡಿಯಲಾಗಿತ್ತು.
ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ನಿಂದ ಜೀವ ಬೆದರಿಕೆಯಿದ್ದ ಹಿನ್ನೆಲೆಯಲ್ಲಿ ಭಾರತಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದ್ದ ಛೋಟಾ ರಾಜನ್, ಕಳೆದ ಆರು ತಿಂಗಳಿನಿಂದ ಅನೇಕ ಪೊಲೀಸ್ ಅಧಿಕಾರಿಗಳೊಂದಿಗೆ ಪಾಸ್ ಪೋರ್ಟ್ ಪಡೆಯಲು ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
