ರಾಷ್ಟ್ರೀಯ

15 ದಿನಗಳ ಹಿಂದೆಯೇ ಚೋಟಾ ರಾಜನ್ ಸೆರೆ; ಶಿಕ್ಷಿಸುವುದಕ್ಕಾಗಿಯಲ್ಲ, ರಕ್ಷಿಸುವುದಕ್ಕಾಗಿ ಬಂಧನ?

Pinterest LinkedIn Tumblr

Raja__ಹೊಸದಿಲ್ಲಿ, ಅ.27: ಭೂಗತ ಪಾತಕಿ ಚೋಟಾ ರಾಜನ್‌ನನ್ನು 15 ದಿನಗಳ ಹಿಂದೆಯೇ ಬಂಧಿಸಲಾಗಿತ್ತು ಎಂದು ಮಂಗಳವಾರ ಕೆಲವು ಬಲ್ಲ ಮೂಲಗಳು ತಿಳಿಸಿದ್ದು, ರಾಜನ್ ಬಂಧನದ ಸುದ್ದಿಗೆ ಹೊಸ ತಿರುವು ಲಭಿಸಿದೆ.

ಚೋಟಾ ರಾಜನ್ ಮೇಲೆ ಸಂಭಾವ್ಯ ದಾಳಿ ನಡೆಯುವುದನ್ನು ತಪ್ಪಿಸಲು ಶರಣಾಗತನಾಗುವಂತೆ ಗುಪ್ತಚರ ಸಂಸ್ಥೆಗಳು ಆತನಿಗೆ ಮನವರಿಕೆ ಮಾಡಿಕೊಟ್ಟವು ಎಂದು ಮೂಲಗಳು ತಿಳಿಸಿವೆ.
ಚೋಟಾ ರಾಜನ್‌ನನ್ನು ಆಸ್ಟ್ರೇಲಿಯದ ಸಿಡ್ನಿಯಲ್ಲೇ ಮುಗಿಸಲು ಇನ್ನೊಬ್ಬ ಭೂಗತ ಪಾತಕಿ ಚೋಟಾ ಶಕೀಲ್ ಉದ್ದೇಶಿಸಿದ್ದ ಎಂದು ಮೂಲಗಳು ಹೇಳಿವೆ.

ಇಂಟರ್‌ಪೋಲ್‌ನ ರೆಡ್ ಕಾರ್ನರ್ ನೋಟಿಸ್‌ನ್ನು ಆಧರಿಸಿ ಇಂಡೋನೇಶ್ಯದ ಪೊಲೀಸರು ರವಿವಾರ ಬಾಲಿಯಲ್ಲಿ ಚೋಟಾ ರಾಜನ್‌ನನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಆಸ್ಟ್ರೇಲಿಯ ನೆರವು: ಯಾವುದೇ ಬಗೆಯ ಚಕಮಕಿ ಇಲ್ಲವೇ ಘರ್ಷಣೆಗೆ ಅವಕಾಶವಿಲ್ಲದೆ ಚೋಟಾ ರಾಜನ್ ಬಂಧನವಾಗಬೇಕೆಂದು ಆಸ್ಟ್ರೇಲಿಯ ಬಯಸಿತ್ತು. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ರಾಜತಾಂತ್ರಿಕ ಮಾರ್ಗದ ಮೂಲಕ ಭಾರತವನ್ನು ಸಂಪರ್ಕಿಸಿ ರಾಜನ್ ಚಲನವಲನಗಳ ಮೇಲೆ ನಿಗಾ ಇರಿಸಿತ್ತು. ಇದೇ ಉದ್ದೇಶದಿಂದ ರಾಜನ್ ಬಂಧನಕ್ಕೆ ಬಾಲಿಯನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

55ರ ಪ್ರಾಯದ ರಾಜೇಂದ್ರ ಸದಾಶಿವ ನಿಕಾಲ್ಜೆ ಅಲಿಯಾಸ್ ಮೋಹನ್ ಕುಮಾರ್ ಅಲಿಯಾಸ್ ಚೋಟಾ ರಾಜನ್ ಎಂಬಾತ ಸಿಡ್ನಿಯಿಂದ ಇಂಡೋನೇಶ್ಯದ ಜನಪ್ರಿಯ ಪ್ರವಾಸಿ ತಾಣ ಬಾಲಿಗೆ ಪ್ರಯಾಣ ಬೆಳೆಸಿದ್ದಾನೆಂದು ಆಸ್ಟ್ರೇಲಿಯ ಪೊಲೀಸರು ಸುಳಿವು ನೀಡಿದ್ದರು. ತದನಂತರ ರವಿವಾರ ಬಾಲಿಯಲ್ಲಿ ಚೋಟಾ ರಾಜನ್‌ನನ್ನು ಅಧಿ ಕೃತವಾಗಿ ಬಂಧಿಸಲಾಯಿತು.

ಚೋಟಾ ರಾಜನ್ ಬಂಧನದ ಮೂಲಕ ದಾವೂದ್ ಇಬ್ರಾಹೀಂ ಸೆರೆಗೆ ಮಾಹಿತಿಗಳು ಲಭಿಸಬಹುದು ಎಂಬ ವಾದವನ್ನು ಈ ಮೂಲಗಳು ತಳ್ಳಿ ಹಾಕಿವೆ.

2000ರಲ್ಲಿ, ದಾವೂದ್ ಬಂಟರು ರಾಜನ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ರಾಜನ್ ಬದುಕುಳಿದಿದ್ದ. ಆದರೆ, ನಂತರದ ದಿನಗಳಲ್ಲಿ ಆತನ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿತು.

2010ರಿಂದ ಆತ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾನೆ. 2015ರಲ್ಲಿ ನ್ಯೂ ಸೌತ್ ವೇಲ್ಸ್‌ನಲ್ಲಿ ಮತ್ತೊಮ್ಮೆ ಆತನ ಮೇಲೆ ದಾವೂದ್ ಬಂಟರಿಂದ ದಾಳಿ ನಡೆದಿತ್ತು ಎನ್ನಲಾಗಿದೆ.

Write A Comment