ನವದೆಹಲಿ: 8 ವರ್ಷದ ಬಾಲೆಯಾಗಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಭಾರತ ಮೂಲದ ಕಿವುಡ ಮತ್ತು ಮೂಗ ಯುವತಿ ಗೀತಾ ಸೋಮವಾರ ಬೆಳಿಗ್ಗೆ ಸ್ವದೇಶಕ್ಕೆ ಮರಳಿದ್ದಾರೆ.
ಸದ್ಯ ಗೀತಾ ಅವರಿಗೆ 23 ವರ್ಷವಾಗಿದೆ. ಲಾಹೋರ್ ರೈಲು ನಿಲ್ದಾಣದಲ್ಲಿ ಸಂಜೋತಾ ಎಕ್ಸ್‌ಪ್ರಸ್ ರೈಲಿನಲ್ಲಿ ಒಂಟಿಯಾಗಿ ಕುಳಿತಿದ್ದ ಅವರನ್ನು ರಕ್ಷಿಸಲಾಗಿತ್ತು. ನಂತರ ಕಳೆದ 15 ವರ್ಷಗಳಿಂದ ಅವರು ಕರಾಚಿಯ ಎಡಿ ಫೌಂಡೇಷನ್‌ನಲ್ಲಿದ್ದರು.
ಎಡಿ ಫೌಂಡೇಷನ್‌ನಲ್ಲಿರುವ ಗೀತಾ ಅವರನ್ನು ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನರ್ ಟಿ.ಸಿ.ಎ. ರಾಘವನ್ ಆಗಸ್ಟ್‌ನಲ್ಲಿ ಭೇಟಿ ಮಾಡಿ ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಿದ್ದರು. ಸೋಮವಾರ ಬೆಳಿಗ್ಗೆ ಅವರು ಸುರಕ್ಷಿತವಾಗಿ ಮರಳಿದ್ದಾರೆ.
ಗೀತಾ ಅವರು ಜಲಂಧರ್ ಸಮೀಪದ ಕರ್ತಾಪುರ್‌ನಿಂದ ಕಾಣೆಯಾಗಿದ್ದರು. ಸದ್ಯ ಅವರ ಕುಟುಂಬ ಪಂಜಾಬ್‌ನಲ್ಲಿ ನೆಲೆಸಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಕಳುಹಿಸಿದ್ದ ಚಿತ್ರಗಳನ್ನು ನೋಡಿ, ಗೀತಾ ಅವರು ತಮ್ಮ ಕುಟುಂಬ ಸದಸ್ಯರನ್ನು ಗುರುತಿಸಿದ್ದಾರೆ. ಆದರೆ, ಡಿಎನ್‌ಎ ಪರೀಕ್ಷೆಯ ನಂತರ, ರಕ್ತ ಸಂಬಂಧ ಖಚಿತಗೊಂಡ ನಂತರವೇ ಅವರನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಖಚಿತಪಡಿಸಿದೆ.
ಕಳೆದ ಕೆಲವು ದಿನಗಳಿಂದ ಪಂಜಾಬ್, ಬಿಹಾರ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳ ನಾಲ್ಕು ಕುಟುಂಬಗಳು ಗೀತಾಳನ್ನು ತಮ್ಮ ಮಗಳೆಂದು ಹೇಳಿಕೊಂಡಿವೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸುಷ್ಮಾ ಶನಿವಾರ ಟ್ವೀಟ್ ಮಾಡಿದ್ದರು.





