ರಾಷ್ಟ್ರೀಯ

ಕೋಮುಹಿಂಸಾಚಾರದ ವಿರುದ್ಧ ಪ್ರತಿಭಟನೆ: ಖ್ಯಾತ ಲೇಖಕಿ ಸಾರಾ ಜೋಸೆಫ್‌ರಿಂದ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಾಪಸ್

Pinterest LinkedIn Tumblr

Sara-Josephಹೊಸದಿಲ್ಲಿ,ಅ.10: ‘ದೇಶದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ’ವನ್ನು ಪ್ರತಿಭಟಿಸಿ ಮಲಯಾಳಂ ಲೇಖಕಿ ಹಾಗೂ ಕಾರ್ಯಕರ್ತೆ ಸಾರಾ ಜೋಸೆಫ್ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಶನಿವಾರ ಹಿಂದಿರುಗಿಸಿದ್ದಾರೆ.
ದೇಶವೀಗ ಅತ್ಯಂತ ಕಠಿಣ ಸಮಯದಲ್ಲಿ ಹಾದು ಹೋಗುತ್ತಿದೆ. ಇದು ತುರ್ತು ಪರಿಸ್ಥಿತಿಯ ಕರಾಳ ದಿನಗಳಿಗಿಂತಲೂ ಕೆಟ್ಟದೆಂಬುದು ತನ್ನ ಭಾವನೆಯಾಗಿದೆಯೆಂದು ತಾನು 2003ರಲ್ಲಿ ಗಳಿಸಿದ್ದ ಪ್ರಶಸ್ತಿಯನ್ನು ಮರಳಿಸುವ ನಿರ್ಧಾರ ಪ್ರಕಟಿಸುವ ವೇಳೆ ಸಾರಾ ಹೇಳಿದರು.
‘‘ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ನಾನು ಹೆಮ್ಮೆಪಟ್ಟಿದ್ದೆ. ಆದರೆ, ದೇಶದ ಆಗು ಹೋಗುಗಳನ್ನು ಗಮನಿಸಿದರೆ, ಈ ಸಂದರ್ಭದಲ್ಲಿ ಲೇಖಕರಿಗೆ ಒಂದು ಹೊಣೆಗಾರಿಕೆ ಇದೆ ಎಂಬುದು ತನ್ನ ಅಭಿಪ್ರಾಯವಾಗಿದೆ. ಆದುದರಿಂದ ಪ್ರತಿಭಟನಾರ್ಥವಾಗಿ ನಾನು ಆಗ ಪಡೆದಿದ್ದ ನಗದು ಸಹಿತ ಪ್ರಶಸ್ತಿಯನ್ನು ಹಿಂದಿರುಗಿಸಲಿದ್ದೇನೆ’’ ಎಂದು ಅವರು ತ್ರಿಶೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಈ ನಿರ್ಧಾರದ ಮೂಲಕ ಸಾರಾ, ತಮ್ಮ ಸಾಹಿತ್ಯಾ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸಿರುವ ನಯನತಾರಾ ಸೆಹಗಲ್ ಹಾಗೂ ಲಲಿತಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ಅಶೋಕ್ ವಾಜಪೇಯಿ ಮತ್ತಿತರ ಲೇಖಕರ ಸಾಲಿಗೆ ಸೇರಿದ್ದಾರೆ.
69ರ ಹರೆಯದ ಸಾರಾ, ತನ್ನ ‘ಆಲಹಯುಡೆ ಪೆಣ್ಮಕ್ಕಳ್’ ಕೃತಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿದ್ದರು. ಅದು 1999ರಲ್ಲಿ ಮೊದಲಿಗೆ ಪ್ರಕಟವಾಗಿತ್ತು.
ಸಾರಾ, ಕೇರಳದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥೆಯಾಗಿದ್ದು, ಕಳೆದ ವರ್ಷ ತ್ರಿಶೂರು ಕ್ಷೇತ್ರದಿಂದ ಲೋಕಸಭಾ ಚುನಾಚಣೆಗೆ ಸ್ಪರ್ಧಿಸಿದ್ದರು.
ಮಲಯಾಳ ಕವಿ ಕೆ. ಸಚ್ಚಿದಾನಂದನ್ ಇಂದು ಅದೇ ಕಾರಣಕ್ಕಾಗಿ ಸಾಹಿತ್ಯ ಅಕಾಡಮಿಯನ್ನು ತ್ಯಜಿಸಿದ್ದಾರೆ. ಕನ್ನಡದ ಬರಹಗಾರ ಎಂ.ಎಂ.ಕಲಬುರ್ಗಿಯವರ ಹತ್ಯೆಯ ವಿಚಾರದಲ್ಲಿ ಅಕಾಡಮಿಯ ವೌನವನ್ನು ಪ್ರತಿಭಟಿಸಿ ಕನ್ನಡ ಮೂಲದ ಲೇಖಕಿ ಶಶಿ ದೇಶಪಾಂಡೆ ಶುಕ್ರವಾರ ಸಾಹಿತ್ಯ ಅಕಾಡಮಿಯ ಸಾಮಾನ್ಯ ಸಮಿತಿಯಿಂದ ಹೊರ ನಡೆದಿದ್ದರು.

Write A Comment