ನಾಥೋವಾಲ್(ಪಂಜಾಬ್): ದಾದ್ರಿಯಲ್ಲಿ ಗೋಮಾಂಸ ವಿಚಾರದಲ್ಲಿ ನಡೆದ ಅಮಾನುಷ ಘಟನೆ ಹಿಂದೂ-ಮುಸ್ಲಿಮರ ನಡುವೆ ಭೀಕರ ಕಂದರ ಸೃಷ್ಟಿಸಿದ ಬೆನ್ನಲ್ಲೊಂದು ಕೋಮುಸೌಹಾರ್ದದ ಶುಭಸುದ್ದಿ. ಪಂಜಾಬ್ ನ ಲುಧಿಯಾನಾದ ನಾಥೋವಾಲ್ ಗ್ರಾಮದಲ್ಲಿ ಸಿಖ್ಖರು ಮತ್ತು ಹಿಂದೂಗಳು ಸೇರಿಕೊಂಡು ಜಖಂಗೊಂಡಿದ್ದ ಹಳೆಯ ಮಸೀದಿಯೊಂದರ ಕಾಯಕಲ್ಪಕ್ಕೆ ಕೈಜೋಡಿಸಿ ಧರ್ಮಧರ್ಮಗಳ ನಡುವೆ ಸೇತುವೆ ಕಟ್ಟಿದ್ದಾರೆ.
ಮಸೀದಿಯ ಎರಡನೇ ಅಂತಸ್ತನ್ನೂ ಇವರೇ ಕಟ್ಟಿಕೊಟ್ಟಿದ್ದು ಮುಸ್ಲಿಮೇತರರೇ ಸುಮಾರು ಶೇ.65ರಷ್ಟು ಖರ್ಚನ್ನೂ ವಹಿಸಿಕೊಂಡಿದ್ದಾರೆ. 7ಸಾವಿರ ಜನಸಂಖ್ಯೆಯಿರುವ ನಾಥೋವಾಲ್ ನಲ್ಲಿ ಇರುವುದು ಕೇವಲ 500 ಮುಸ್ಲಿಮರು.
ಇಲ್ಲಿ ದೇಶವಿಭಜನೆಗೂ ಮೊದಲಿನಿಂದ ಇಲ್ಲಿಯತನಕವೂ ಕೋಮುಸೌಹಾರ್ದ ಕದಡಿಲ್ಲ. ಕೆಲವು ಮುಸ್ಲಿಂ ಕುಟುಂಬಗಳು ವಿಭಜನೆ ನಂತರ ಪಾಕ್ ಗೆ ಹೊರಟಾಗ ಹಿಂದೂಗಳೇ ಅವರನ್ನು ಒತ್ತಾಯಿಸಿ ಇಲ್ಲಿರಿಸಿಕೊಂಡಿದ್ದರು ಎಂದು ಮುಸ್ಲಿಂ ಮಹಿಳೆಯೊಬ್ಬರು ಹೇಳುತ್ತಾರೆ.
6 ತಿಂಗಳ ಹಿಂದೆ ಶುರುವಾದ ದುರಸ್ತಿ ಕಾರ್ಯಕ್ಕೆ 25 ಲಕ್ಷ ಖರ್ಚಾಗಿದ್ದು, 15 ಲಕ್ಷವನ್ನು ಹಿಂದೂ ಮತ್ತು ಸಿಖ್ಖರೇ ಭರಿಸಿದ್ದಾರೆಂಬುದು ವಿಶೇಷ. ಇದಕ್ಕೆ ಪ್ರೀತಿಯಿಂದಲೇ ಋಣಸಂದಾಯಮಾಡುವ ಇರಾದೆ ವ್ಯಕ್ತಪಡಿಸಿರುವ ಮುಸ್ಲಿಮರು ದೇವಸ್ಥಾನ ಕಟ್ಟಿಕೊಡುವ ಆಸೆ ತೋರಿದ್ದಾರೆ.
ಹಬ್ಬದ ಸಮಯಗಳಲ್ಲೂ ಇಲ್ಲಿ ಎರಡೂ ಕೋಮಿನವರು ಸೇರಿ ಹಬ್ಬ ಮಾಡುವುದು ವಾಡಿಕೆ ಎಂದು ಅಲ್ಲಿನ ಸಿಖ್ ಯುವಕನೊಬ್ಬ ಖುಷಿಯಿಂದ ಹೇಳಿಕೊಂಡಿದ್ದಾನೆ.
