ರಾಷ್ಟ್ರೀಯ

ಬಿಹಾರ: ಸಿಎನ್‌ಎನ್-ಐಬಿಎನ್ ಸಮೀಕ್ಷೆ; ಮಹಾಮೈತ್ರಿಗೆ ಸ್ಪಷ್ಟ ಬಹುಮತ

Pinterest LinkedIn Tumblr

Biharaಹೊಸದಿಲ್ಲಿ, ಅ.8: ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಮಹಾಮೈತ್ರಿಕೂಟವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 129-145 ಸ್ಥಾನ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 87-103 ಸ್ಥಾನಗಳನ್ನು ಪಡೆಯಲಿವೆ ಎಂದು ‘ಸಿಎನ್‌ಎನ್-ಐಬಿಎನ್-ಆಕ್ಸಿಸ್ ಮೈ ಇಂಡಿಯಾ’ ಮತದಾನ ಪೂರ್ವ ಸಮೀಕ್ಷೆ ತಿಳಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು, ಎರಡೂ ಮೈತ್ರಿಕೂಟಗಳು ಪಡೆದುಕೊಳ್ಳಲಿರುವ ಸ್ಥಾನಗಳ ನಡುವಣ ಅಂತರ ಬಹಳ ಗಮನಾರ್ಹವಾಗಿದೆ.
243 ಸ್ಥಾನಗಳ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತವನ್ನು ಪಡೆದುಕೊಳ್ಳಲು ಯಾವುದೇ ಮೈತ್ರಿಕೂಟವು 122 ಸ್ಥಾನಗಳಲ್ಲಿ ಜಯ ಗಳಿಸಬೇಕು. ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ-ಎಲ್‌ಜೆಪಿ-ಆರ್‌ಎಲ್‌ಎಸ್‌ಪಿ ಹಾಗೂ ಹಿಂದೂಸ್ಥಾನಿ ಆವಾಂ ಮೋರ್ಚಾವನ್ನು ಒಳಗೊಂಡ ಎನ್‌ಡಿಎ ಮೈತ್ರಿಕೂಟಗಳು ಪ್ರಮುಖವಾಗಿ ಚುನಾವಣಾ ಕಣದಲ್ಲಿವೆ. ಇವೆರಡು ಮೈತ್ರಿಕೂಟಗಳ ಜೊತೆಗೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಎನ್‌ಸಿಪಿ, ಎಐಎಂಐಎಂ ಮೊದಲಾದ ರಾಜಕೀಯ ಪಕ್ಷಗಳು ಚುನಾವಣಾ ಕಣದಲ್ಲಿದ್ದರೂ ಈ ಪಕ್ಷಗಳು ಬಿಹಾರದಲ್ಲಿ ಅಂತಹ ಪ್ರಭಾವವನ್ನು ಹೊಂದಿಲ್ಲ. ಈ ಎಲ್ಲ ಪಕ್ಷಗಳು ಹಾಗೂ ಪಕ್ಷೇತರರು ಸೇರಿ 8-14 ಸ್ಥಾನಗಳನ್ನು ಪಡೆದುಕೊಳ್ಳಬಹುದು ಎಂದು ಸಮೀಕ್ಷೆ ತಿಳಿಸಿದೆ. ಈ ಮತದಾನ ಪೂರ್ವ ಸಮೀಕ್ಷೆ ನಿಜವೆಂದು ಸಾಬೀತಾದಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬೀಳುವುದರಲ್ಲಿ ಸಂಶಯವಿಲ್ಲ. ದಿಲ್ಲಿ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಬಿಜೆಪಿಗೆ ಎರಡನೆ ಸಲ ಮುಖಭಂಗ ಉಂಟಾಗಲಿದೆ.
ಬಿಹಾರ ವಿಧಾನಸಭೆಯಲ್ಲಿ ಜೆಡಿಯು 100 ಸ್ಥಾನಗಳಿಗೆ ಸ್ಪರ್ಧಿಸಿದ್ದು, 64-74 ಸ್ಥಾನಗಳಲ್ಲಿ ಜಯ ಗಳಿಸುವ ನಿರೀಕ್ಷೆ ಇದೆ. ಅದೇ ರೀತಿ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ 100 ಸ್ಥಾನಗಳ ಪೈಕಿ 46-50 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. 40 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ 19-21 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು 160 ಸ್ಥಾನಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ 77-87 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ರಾಂ ವಿಲಾಸ್ ಪಾಸ್ವಾನ್‌ರವರ ಎಲ್‌ಜೆಪಿ ಕೇವಲ 1-3 ಸ್ಥಾನಗಳು, ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿ 2-4 ಸ್ಥಾನಗಳು ಹಾಗೂ ಮಾಂಜ್ಹಿ ಅವರ ಎಚ್‌ಎಎಂ 7-9 ಸ್ಥಾನಗಳಲ್ಲಿ ಜಯ ಗಳಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ.
ರಾಜ್ಯದ 17 ಸ್ಥಾನಗಳಲ್ಲಿ ಪ್ರಬಲ ಚುನಾವಣಾ ಹೋರಾಟವಿದ್ದು, ಅವುಗಳನ್ನು ಮೈತ್ರಿಕೂಟಗಳ ಒಟ್ಟು ಸ್ಥಾನಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

Write A Comment