ಹೊಸದಿಲ್ಲಿ, ಅ.6: ಹಜ್ ವೇಳೆ ಸೌದಿ ಅರೇಬಿ ಯದ ಮಕ್ಕಾದಲ್ಲಿ ಕಾಲ್ತುಳಿತದಲ್ಲಿ ಮೃತ ಪಟ್ಟ ಭಾರತೀಯರ ಸಂಖ್ಯೆ ಮಂಗಳವಾರ 74ಕ್ಕೇರಿದೆ. ಇದೇ ವೇಳೆ, 25 ವರ್ಷಗಳಲ್ಲೇ ಅತ್ಯಂತ ಭೀಕರ ಕಾಲ್ತುಳಿತದ ಬಳಿಕ ನಾಪತ್ತೆಯಾದ ಹಲವಾರು ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಸೌದಿ ಅಧಿಕಾರಿಗಳು ಘೋಷಿಸಿದ್ದಾರೆ.
‘‘ಹಜ್ ಕಾಲ್ತುಳಿತ- ಸೌದಿ ಅರೇಬಿಯ ಇನ್ನೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತೀಯರ ಸಾವಿನ ಸಂಖ್ಯೆ ಈಗ 74’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಪವಿತ್ರ ನಗರ ಮಕ್ಕಾ ಸಮೀಪದ ಮಿನಾದಲ್ಲಿ ಸೆಪ್ಟಂಬರ್ 24ರಂದು ವಾರ್ಷಿಕ ಹಜ್ ವೇಳೆ ನಡೆದ ಕಾಲ್ತುಳಿತದ ಬಳಿಕ ಹಲವಾರು ಭಾರತೀಯರು ಹಾಗೂ ಇತರ ದೇಶಗಳ ನಾಗರಿಕರು ನಾಪತ್ತೆಯಾಗಿದ್ದರು. 78 ಭಾರತೀಯರು ನಾಪತ್ತೆಯಾಗಿದ್ದಾರೆ ಹಾಗೂ ಅವರನ್ನು ಪತ್ತೆಹಚ್ಚಲು ಸರಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಈ ಮೊದಲು ಸ್ವರಾಜ್ ಹೇಳಿದ್ದರು. ಹಜ್ ದುರಂತದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 1,036 ಆಗಿರಬಹುದು ಎಂದು ವರದಿಗಳು ಹೇಳಿವೆ.
ನಾಪತ್ತೆಯಾಗಿರುವ ಭಾರತೀಯರನ್ನು ಪತ್ತೆಹಚ್ಚುವಲ್ಲಿ ಅಲ್ಲಿನ ಅಧಿಕಾರಿಗಳಿಗೆ ನೆರವಾಗಲು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್‌ರನ್ನು ಸೌದಿ ಅರೇಬಿಯಕ್ಕೆ ಕಳುಹಿಸಲಾಗಿದೆ.
ವಿವಿಧ ದೇಶಗಳ ನಾಗರಿಕರ ಬಗ್ಗೆ ಮಾಹಿತಿ ಪಡೆಯಲು ಆಯಾಯ ದೇಶಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂಬುದಾಗಿ ಸೌದಿ ಅರೇಬಿಯ ಸರಕಾರ ಭಾರತಕ್ಕೆ ತಿಳಿಸಿದ ಬಳಿಕ, ಮಕ್ಕಾಗೆ ಹೋಗುವಂತೆ ಸೋಮವಾರ ಸ್ವರಾಜ್ ತನ್ನ ಸಹಾಯಕ ಸಚಿವರಿಗೆ ಸೂಚಿಸಿದ್ದರು. ಸಚಿವರು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುವರು ಹಾಗೂ ಅಲ್ಲಿನ ಕಾನ್ಸುಲ್ ಜನರಲ್‌ರ ಪ್ರಯತ್ನಗಳಿಗೆ ಬಲ ತುಂಬುವರು.
ರಾಷ್ಟ್ರೀಯ