ನವದೆಹಲಿ: ಗೋಮಾಂಸ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಗೋಮಾಂಸ ತಿನ್ನುವವರಿಗೆ ಇದು ಆಗಬೇಕಿತ್ತು ಎಂದು ವಿಹೆಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಶನಿವಾರ ಹೇಳಿದ್ದಾರೆ.
ವಿವಾದಗಳ ಮೂಲಕ ಬಿಜೆಪಿ ಪ್ರತಿಷ್ಠೆಗೆ ಕಪ್ಪು ಚುಕ್ಕೆ ತರುತ್ತಿರುವ ನಾಯಕರಲ್ಲಿ ಸಾಧ್ವಿ ಪ್ರಾಚಿ ಕೂಡ ಒಬ್ಬರಾಗಿದ್ದು, ಇದೀಗ ಕೋಮುವಾದ ಪ್ರಕರಣ ಎಂದೇ ದೇಶದಾದ್ಯಂತ ಹೆಸರು ಮಾಡುತ್ತಿರುವ ದಾದ್ರಿ ಪ್ರಕರಣ ಸಂಬಂಧ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಗೋಮಾಂಸ ತಿನ್ನುವವರಿಗೆ ಇದು ಆಗಬೇಕಿತ್ತು. ಗೋಮಾಂಸ ತಿನ್ನುವವರಿಗೆ ಇದೊಂದು ತಕ್ಕ ಪಾಠವಾಗಲಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ದಾದ್ರಿ ಬಳಿಯ ಬಿಶಾದಾ ಗ್ರಾಮದಲ್ಲಿರುವ ಮುಸ್ಲಿಂ ಕುಟುಂಬವೊಂದು ಮನೆಯಲ್ಲಿ ಗೋಮಾಂಸವಿಟ್ಟುಕೊಂಡಿದ್ದಾರೆ ಎಂಬ ಶಂಕೆ ಹಿನ್ನೆಲೆ ಮನೆಗೆ ನುಗ್ಗಿದ ಉದ್ರಿಕ್ತ ಗುಂಪೊಂದು ಮೊಹಮ್ಮದ್ ಇಕ್ಲಾಖ್ ಹತ್ಯೆ ಮಾಡಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಈ ನಡುವೆ ಉತ್ತರ ಪ್ರದೇಶ ಪೊಲೀಸರು ಶಿವಂ ಮತ್ತು ವಿಶಾಲ್ ಎಂಬ ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.