ಲಕ್ನೋ, ಅ.2: ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ‘ಗುಲಾಬಿ ಕ್ರಾಂತಿ’ಯ ವಿರುದ್ಧ ಮಾತನಾಡಿದವರೇ ಈಗ ಅಧಿಕಾರದಲ್ಲಿರುವುದರಿಂದ ಅವರು ಗೋಮಾಂಸ ರಫ್ತನ್ನು ನಿಷೇಧಿಸಬೇಕು ಎಂದು ಹೇಳಿದರಲ್ಲದೆ, ಅವರು ಇಂತಹ ವಿಷಯಗಳನ್ನು ಕೆದಕುವ ಮೂಲಕ ದೇಶದ ಜಾತ್ಯತೀತ ಲಕ್ಷಣವನ್ನು ಹಾಳುಗೆಡವಲು ಬಯಸಿದ್ದಾರೆ ಎಂದು ಆರೋಪಿಸಿದರು. ದಾದ್ರಿ-ಬಿಸಾಡಾದಲ್ಲಿ ಗೋಮಾಂಸವನ್ನು ಸೇವಿಸಿದ ಆರೋಪದಲ್ಲಿ ಗ್ರಾಮಸ್ಥರ ಗುಂಪಿನಿಂದ ಮೊಹಮ್ಮದ್ ಇಖ್ಲಾಕ್ ಎಂಬ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ನಮ್ಮ ಧರ್ಮ ಮತ್ತು ನಮ್ಮ ದೇಶ’ ಜನರಿಗೆ ತಾವು ಬಯಸಿದ ರೀತಿಯಲ್ಲಿ ಬದುಕುವ ಹಾಗೂ ತಮ್ಮ ಹಕ್ಕುಗಳ ಗೌರವ ಮತ್ತು ರಕ್ಷಣೆಯ ಅವಕಾಶವನ್ನು ನೀಡಿವೆ ಎಂದು ಒತ್ತಿ ಹೇಳಿದರು.ವದಂತಿಯಲ್ಲಿ ಯಾವುದೇ ಸತ್ಯವಿರುವುದಿಲ್ಲ. ಆದರೆ ಅದು ಬಹಳಷ್ಟು ಅನಾಹುತಗಳಿಗೆ ಕಾರಣವಾಗಬಲ್ಲದು. ನಮ್ಮ ಸಂವಿಧಾನವು ಜಾತ್ಯತೀತತೆಯನ್ನು ಆಧರಿಸಿದೆ. ನಮ್ಮ ಎಲ್ಲ ಯೋಜನೆಗಳೂ ಈ ನೀತಿಯನ್ನೇ ಬುನಾದಿಯಾಗಿಸಿಕೊಂಡಿವೆ. ಆದರೆ ಕೆಲವು ಶಕ್ತಿಗಳು ವಾತಾವರಣವನ್ನು ಕೆಡಿಸಲು ಬಯಸುತ್ತಿವೆ ಎಂದರು.
ಗೋಮಾಂಸ ನಿಷೇಧದ ವಿರುದ್ಧ ಮಾತನಾಡಿದವರೇ ಈಗ ಅಧಿಕಾರದಲ್ಲಿದ್ದಾರೆ. ಅವರೀಗ ಗೋಮಾಂಸ ರಫ್ತನ್ನು ನಿಷೇಧಿಸಲಿ ಎಂದು ಅವರು ಮೋದಿಯವರನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಹೇಳಿದರು. ಕಳೆದ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಗೋಮಾಂಸ ರಫ್ತು ಕುರಿತಂತೆ ಆಗಿನ ಉ.ಪ್ರದೇಶ ಸರಕಾರದ ವಿರುದ್ಧ ದಾಳಿ ನಡೆಸಿದ್ದ ಮೋದಿ, ಅದು ‘ಗುಲಾಬಿ ಕ್ರಾಂತಿ ‘ಯನ್ನು ಉತ್ತೇಜಿಸುತ್ತಿದೆ ಎಂದು ಟೀಕಿಸಿದ್ದರು. ವಿದೇಶಗಳಲ್ಲಿ ದೇಶಕ್ಕೆ ಮಾರುಕಟ್ಟೆ ಕಲ್ಪಿಸಲು ವಿದೇಶಗಳನ್ನು ಸುತ್ತುತ್ತಿರುವವರು ಅಲ್ಲಿಯ ಜನರ ಆಹಾರವನ್ನು ಗಮನಿಸಲಿ. ಬೆಳಿಗ್ಗೆಯಿಂದ ಸಂಜೆಯವರೆಗೂ ಅವರೇನು ತಿನ್ನುತ್ತಾರೆ ಎನ್ನುವುದನ್ನು ಒಮ್ಮೆ ನೋಡಲಿ. ಆದ್ದರಿಂದ ನಾವು ಪರಸ್ಪರರ ಜೀವನ ವಿಧಾನದಲ್ಲಿ ಹಸ್ತಕ್ಷೇಪ ಮಾಡಕೂಡದು ಎಂದು ಅಖಿಲೇಶ್ ಮೋದಿಯವರ ಹೆಸರನ್ನು ಪ್ರಸ್ತಾಪಿಸದೆ ಹೇಳಿದರು. ತನ್ಮಧ್ಯೆ ಇಖ್ಲಾಕ್ ಹತ್ಯೆ ಕುರಿತಂತೆ ರಾಜ್ಯದಲ್ಲಿ ಆಡಳಿತ ಎಸ್‌ಪಿ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. 2017ರಲ್ಲಿ ನಡೆಯಲಿರುವ ಉ.ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಜನರನ್ನು ಧ್ರುವೀಕರಿಸುವ ತನ್ನ ಪ್ರಯತ್ನದ ಅಂಗವಾಗಿ ಬಿಜೆಪಿ ಉದ್ದೇಶಪೂರ್ವಕವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಎಂದು ಎಸ್‌ಪಿ ಆರೋಪಿಸಿದ್ದರೆ, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ರಾಜ್ಯ ಸರಕಾರದ ವೈಫಲ್ಯವಾಗಿದೆ ಎಂದು ಬಿಜೆಪಿ ಬಣ್ಣಿಸಿದೆ.
ಅಖಿಲೇಶ್‌ಗೆ ನಿರ್ಮಲಾ ಸೀತಾರಾಮನ್ ಉತ್ತರಹೊಸದಿಲ್ಲಿ, ಅ.2: ಗೋಮಾಂಸ ರಫ್ತನ್ನು ನಿಷೇಧಿಸುವಂತೆ ಕೇಂದ್ರ ಸರಕಾರಕ್ಕೆ ಸವಾಲು ಹಾಕಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿಕೆಗೆ ಕೇಂದ್ರ ಸರಕಾರ ಶುಕ್ರವಾರ ಪ್ರತ್ಯುತ್ತರ ನೀಡಿದೆ.ದನ ಮತ್ತು ಕರುಗಳ ಮಾಂಸ ಸೇರಿದಂತೆ ಇಂತಹ ವಸ್ತುಗಳ ರಫ್ತನ್ನು ಈಗಾಗಲೇ ನಿಷೇಧಿಸಲಾಗಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಗೋಮಾಂಸ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಪರಸ್ಪರ ಪ್ರತ್ಯಾರೋಪ ಮುಂದುವರಿದಿದೆ. ಕೇಂದ್ರದಲ್ಲಿ ಆಳುವ ಪಕ್ಷವು ಜಾತ್ಯತೀತ ತತ್ವಗಳನ್ನು ಹಾಳುಗೆಡಹುತ್ತಿದೆ ಎಂದು ಆರೋಪಿಸಿದ್ದ ಅಖಿಲೇಶ್, ಗೋಮಾಂಸ ರಫ್ತನ್ನು ನಿಷೇಧಿಸುವಂತೆ ಸವಾಲು ಹಾಕಿದ್ದರು.ಕೇಂದ್ರ ಸರಕಾರದ ಮಾಂಸ ರಫ್ತು ನೀತಿಯಡಿಯಲ್ಲಿ ಗೋಮಾಂಸದ (ದನ, ಎತ್ತು ಮತ್ತು ಕರು) ರಫ್ತು ಈಗಾಗಲೇ ನಿಷೇಧಗೊಂಡಿದೆ ಎಂಬುದು ಉತ್ತರ ಪ್ರದೇಶ ಮುಖ್ಯಮಂತ್ರಿಗೆ ತಿಳಿದಿರಲಿ ಎಂದು ಸರಣಿ ಟ್ವೀಟ್ ಮಾಡುತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.ಕೋಣಗಳ ಮೂಳೆರಹಿತ ಮಾಂಸ, ಆಡು ಮತ್ತು ಕುರಿ ಮಾಂಸದ ರಫ್ತಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.