ರಾಷ್ಟ್ರೀಯ

ಪನ್ಸಾರೆ-ದಾಭೋಲ್ಕರ್-ಕಲಬುರ್ಗಿ ಹತ್ಯೆ ನಡುವೆ ಪ್ರಬಲ ಸಂಬಂಧ

Pinterest LinkedIn Tumblr

PDKಮುಂಬೈ, ಅ.2: ಸಾಮಾಜಿಕ ಕಾರ್ಯಕರ್ತ ಗೋವಿಂದ ಪನ್ಸಾರೆ ಹತ್ಯೆಯ ಸಂಬಂಧವಾಗಿ ಈಗ ಪೊಲೀಸರ ವಶದಲ್ಲಿರುವ ಸಮೀರ್ ದಿಲೀಪ್ ಗಾಯಕವಾಡ್‌ನಿಂದ ವಶಪಡಿಸಿಕೊಳ್ಳಲಾಗಿರುವ ದಾಖಲೆಪತ್ರಗಳು, ಪನ್ಸಾರೆ, ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಖ್ಯಾತ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಘಟನೆಗಳ ನಡುವೆ ಪ್ರಬಲ ಸಂಬಂಧವಿರುವುದನ್ನು ರುಜುವಾತುಪಡಿಸುತ್ತಿವೆ.

ಗಾಯಕವಾಡ್‌ನಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಹಲವರ ಮೊಬೈಲ್ ಸಂಖ್ಯೆಗಳು ಪತ್ತೆಯಾಗಿವೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಗಾಯಕವಾಡ್, ಗೋವಾದ ರಾಮನಾಥಿ ಗ್ರಾಮದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸನಾತನ ಸಂಸ್ಥೆಯ ಪೂರ್ಣಾವಧಿ ಕಾರ್ಯಕರ್ತನಾಗಿದ್ದಾನೆ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯೊಬ್ಬನ ಡೈರಿಯಲ್ಲೂ ಹಲವಾರು ಮೊಬೈಲ್ ಸಂಖ್ಯೆಗಳು ಇರುವುದನ್ನು ಮಹಾರಾಷ್ಟ್ರ ಪೊಲೀಸರು ಕಂಡುಕೊಂಡಿದ್ದಾರೆ.

ಈ ಹಿಂದೆ, ಸನಾತನ ಸಂಸ್ಥೆಯ ಕೆಲವು ಸದಸ್ಯರು ಮೂರು ಪ್ರತ್ಯೇಕ ಬಾಂಬ್ ಸ್ಫೋಟದ ಘಟನೆಗಳಲ್ಲಿ (ಥಾಣೆ, ವಾಶಿ, ಮಡಗಾಂವ್) ಶಾಮೀಲಾಗಿರುವುದು ಕಂಡುಬಂದಿದೆ. ಗಾಯಕವಾಡ್, ತನ್ನ ಡೈರಿಯಲ್ಲಿ ಹಲವರ ಮೊಬೈಲ್ ಸಂಖ್ಯೆಯನ್ನು ಟಿಪ್ಪಣಿ ಮಾಡಿಕೊಂಡಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಇದರಲ್ಲಿ ಹಲವರು ನಮ್ಮ ನಿಗಾದಲ್ಲಿ ಇದ್ದಾರೆ. ಈ ದಿಸೆಯಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ಈ ಮಾಹಿತಿಯನ್ನು ಮೂರೂ ಪ್ರಕರಣಗಳ ತನಿಖಾಧಿಕಾರಿಗಳು ಹಂಚಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂವರು ಗಣ್ಯರ ಹತ್ಯೆ ಪ್ರಕರಣಗಳಲ್ಲಿ ಸಂಭಾವ್ಯ ಸಂಬಂಧಗಳು ಇರುವ ಬಗ್ಗೆ ಇವು ನಮಗೆ ಸುಳಿವು ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

ದಾಭೋಲ್ಕರ್ ಹತ್ಯೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಕಲಬುರ್ಗಿ ಹತ್ಯೆಯ ಕುರಿತು ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಕ್ವಾಡ್‌ನನ್ನು ಬಂಧಿಸಿರುವ ಮಹಾರಾಷ್ಟ್ರ ಪೊಲೀಸ್‌ನ ವಿಶೇಷ ತನಿಖಾ ತಂಡವೊಂದು ಪನ್ಸಾರೆ ಹತ್ಯೆಯ ಕುರಿತು ತನಿಖೆ ನಡೆಸುತ್ತಿದೆ. ಗಾಯಕ್ವಾಡ್‌ನನ್ನು ಕೊಲ್ಹಾಪುರದಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಮೂರೂ ಪ್ರಕರಣಗಳ ತನಿಖಾಧಿಕಾರಿಗಳು ಈಗ ಅಲ್ಲಿದ್ದಾರೆ.

ಗಾಯಕವಾಡ್‌ನ ಡೈರಿಯಲ್ಲಿ ನಮೂದಾಗಿರುವ ಹಲವು ಮೊಬೈಲ್ ಫೋನ್ ಸಂಖ್ಯೆಗಳನ್ನು (ಸಿಮ್) ಏಕಕಾಲದಲ್ಲಿ ಖರೀದಿಸಲಾಗಿದ್ದು, ಸರಣಿ ಸಂಖ್ಯೆಯ ರೂಪದಲ್ಲಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಮೊಬೈಲ್ ಫೋನ್ ಸಂಖ್ಯೆಗಳ ಗ್ರಾಹಕರು ಪರಸ್ಪರ ಆಪ್ತ ಗುಂಪಿನ ಸದಸ್ಯರಾಗಿರುವ ಸಾಧ್ಯತೆ ಗಳಿವೆ. ಗುಂಪಿನ ಸದಸ್ಯರ ನಡುವೆ ಆಗಾಗ ಮೊಬೈಲ್ ಸಂಖ್ಯೆಗಳ ವಿನಿಮಯ ನಡೆದಿರುವ ಸಂಭವವಿದೆ. ಇದರಿಂದ ನಿರ್ದಿಷ್ಟ ಸಂಖ್ಯೆಯೊಂದು ಬೇರೆಬೇರೆ ಮೊಬೈಲ್ ಗೋಪುರಗಳ ವ್ಯಾಪ್ತಿಯಲ್ಲಿರುವುದು ಕಂಡುಬಂದಿದೆ. ಹೀಗಾಗಿ ನಿರ್ದಿಷ್ಟ ವ್ಯಕ್ತಿಯನ್ನು ಖಚಿತವಾಗಿ ಗುರುತಿಸುವುದು ಕಷ್ಟಕರವಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ನಿರ್ದಿಷ್ಟ ವ್ಯಕ್ತಿಗಳ ಪತ್ತೆ: ಅಪರಾಧ ಕೃತ್ಯ ನಡೆದು ಬಹಳ ಸಮಯವಾಗಿರುವುದರಿಂದ ಮೊಬೈಲ್ ಫೋನ್ ಸಂಖ್ಯೆಗಳು ಮಹತ್ವದ ಸುಳಿವು ಆಗಿರುತ್ತವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಸಾಕ್ಷಾಧಾರದಿಂದಾಗಿ ತನಿಖೆಯ ವ್ಯಾಪ್ತಿಯನ್ನು ನಿರ್ದಿಷ್ಟ ಗುರಿಯತ್ತ ಕೊಂಡೊಯ್ಯುವುದು ಸಾಧ್ಯವಾಗಿದೆ. ಈಗ ನಾವು ನಿರ್ದಿಷ್ಟ ವ್ಯಕ್ತಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ನಿರ್ಣಾಯಕ ಸಂಬಂಧಗಳು: ಸಮೀರ್ ದಿಲೀಪ್ ಗಾಯಕವಾಡ್, ಬಲಪಂಥೀಯ ಸನಾತನ ಸಂಸ್ಥೆಯ ಪೂರ್ಣಾವಧಿ ಕಾರ್ಯಕರ್ತ. ಗಾಯಕವಾಡ್ ಡೈರಿಯಲ್ಲಿರುವ ಹಲವಾರು ಮೊಬೈಲ್ ಫೋನ್ ಸಂಖ್ಯೆಗಳು ಏಕಕಾಲದಲ್ಲಿ ಖರೀದಿಯಾಗಿದ್ದು, ಸರಣಿ ಸಂಖ್ಯೆಯ ರೂಪದಲ್ಲಿವೆ. ದಾಭೋಲ್ಕರ್ ಹತ್ಯೆಯ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಕರ್ನಾಟಕ ಪೊಲೀಸರು ಕಲಬುರ್ಗಿ ಹತ್ಯೆ ತನಿಖೆ ಕೈಗೊಂಡಿದ್ದಾರೆ. ಮಹಾರಾಷ್ಟ್ರದ ‘ಸಿಟ್’ ಪನ್ಸಾರೆ ಹತ್ಯೆಯ ತನಿಖೆ ನಡೆಸುತ್ತಿದೆ. ಮೊಬೈಲ್ ಫೋನ್ ಸಂಖ್ಯೆಗಳ ಮೂಲಕ ಈ ಮೂವರು ಗಣ್ಯ ವ್ಯಕ್ತಿಗಳ ಹತ್ಯೆಯ ನಡುವೆ ಸಂಬಂಧವಿರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Write A Comment