ಸಿಮ್ಲಾ, ಅ.1: ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿಪಾಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಪತ್ನಿ ಪ್ರತಿಭಾ ಸಿಂಗ್ ಅವರನ್ನು ಬಂಧಿಸದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಮುಂದುವರಿಸಲು ಕೋರ್ಟ್ ಸಿಬಿಐಗೆ ಅನುಮತಿ ನೀಡಿದೆ.
ವೀರಭದ್ರ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿರುವ ಹೈಕೋರ್ಟ್ನ ವಿಭಾಗೀಯ ಪೀಠ, ದಂಪತಿಯನ್ನು ತನಿಖೆಗೆ ಒಳಪಡಿಸುವ ಮುನ್ನ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸಿಬಿಐಗೆ ಆದೇಶ ನೀಡಿದೆ. ಈ ಮಧ್ಯೆ, ನ್ಯಾ.ರಾಜೀವ್ ಶರ್ಮಾ ಮತ್ತು ನ್ಯಾ.ಸುರೇಶ್ವರ್ ಥಾಕೂರ್ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದೆ.