ನವದೆಹಲಿ, ಸೆ.30-ಇದೊಂದು ದೊಡ್ಡವರು ಮತ್ತು ಬುದ್ಧಿವಂತರು ಮಾತ್ರ ಓದಬೇಕಾದ ಸುದ್ದಿ. ಪರಿಸರ ಮಾಲಿನ್ಯವನ್ನು ಭರಿಸಲಾರದ 6 ತಿಂಗಳು ವಯಸ್ಸಿನ ಎರಡು ಹಾಗೂ 14 ತಿಂಗಳ ಒಂದು, ಒಟ್ಟು ಮೂರು ಹಸುಗೂಸುಗಳು ಮುಂಬರುವ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭ ಪಟಾಕಿಗಳನ್ನು ಹೊಡೆಯದಂತೆ ನಿಷೇಧಿಸಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿವೆ. ಅತ್ಯಂತ ಅಪರೂಪದ ಪ್ರಕರಣ ಇದಾಗಿದೆ ಎಂದಿರುವ ಸರ್ವೋಚ್ಚ ನ್ಯಾಯಾಲಯ, ಕಂದಮ್ಮಗಳ ಅರ್ಜಿಗೆ ಅನುಮತಿ ನೀಡಿದೆ. 6 ತಿಂಗಳ ಅರ್ಜುನ್ಗೋಪಾಲ್ ಮತ್ತು ಅರವ ಭಂಡಾರಿ ಹಾಗೂ 14 ತಿಂಗಳ ಝೋಯಾರಾವ್ ಭಾಸಿನ್ ತಮ್ಮ ನ್ಯಾಯವಾದಿ ಅಪ್ಪಂದಿರ ಮೂಲಕ ನ್ಯಾಯಾಲಯದ ಮೊರೆ ಹೋಗಿವೆ. ಆ ಮಕ್ಕಳ ಮನವಿ ಇಷ್ಟೇ: ಹಬ್ಬಗಳು, ಉತ್ಸವಗಳಲ್ಲಿ ಸಿಡಿಸುವ ಪಟಾಕಿಗಳ ಹೊಗೆ, ವಾಸನೆಯಿಂದಾಗಿ ಇಡೀ ಪರಿಸರ ವಿಷಕಾರಿಯಾಗುತ್ತದೆ.
ಈ ವಿಷವನ್ನು ಭರಿಸುವಷ್ಟು ನಮ್ಮ ಶ್ವಾಸಕೋಶಗಳು ಅಬಿವೃದ್ಧಿ ಹೊಂದಿಲ್ಲ. ಹಾಗಾಗಿ ನಮ್ಮನ್ನು ರಕ್ಷಿಸಿ. ಸಂವಿಧಾನದತ್ತವಾದ ಅಧಿನಿಯಮ 21ನೆ ಪರಿಚ್ಛೇದದ ಅನ್ವಯ ನಮಗೆ ಸ್ವಚ್ಛ ಪರಿಸರದಲ್ಲಿ ಬದುಕುವ ನಮ್ಮ ಹಕ್ಕನ್ನು ನಮಗೆ ಕೊಡಿ ಎಂಬುದು. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನು ಗಳನ್ನು ಆಡಳಿತ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಪಟಾಕಿ ಸಿಡಿಸುವುದನ್ನು ನಿಷೇಧಿಸುತ್ತಿಲ್ಲ. ಹಾಗಾಗಿ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ನಮ್ಮಂತಹ ಭವಿಷ್ಯದತ್ತ ಪ್ರಜೆಗಳನ್ನು ರಕ್ಷಿಸಬೇಕು ಎಂದು ಈ ಹಸುಗೂಸುಗಳು ತಮ್ಮ ಅಳಲು ತೋಡಿಕೊಂಡಿವೆ.
ಒಂದು ಕಡೆ ಸರ್ಕಾರ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಈ ಪಟಾಕಿಯಿಂದಾಗುತ್ತಿರುವ ದುಷ್ಪರಿಣಾಮ ತೊಡೆಯಲು ತೆಗೆದುಕೊಳ್ಳ ಬೇಕಾದ ಕಾನೂನು ಕ್ರಮಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಹಾಗಾದರೆ ಸ್ವಚ್ಛ ಭಾರತದ ವೈಫಲ್ಯವೇ ಇದು ಎಂಬುದು ಅರ್ಜಿದಾರ ಕೂಸುಗಳ ಸಂವೇದನಾತ್ಮಕ ಪ್ರಶ್ನೆಯಾಗಿದೆ. ಹೊಗೆ ಉಗುಳುವ, ಕರ್ಕಶಶಬ್ಧದ ಹಾರನ್ಗಳ ವಾಹನಗಳ ಬಗ್ಗೆಯೂ ಕ್ರಮ ಅಗತ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಾಗಾಗಿ ಬುದ್ಧಿವಂತರು, ದೊಡ್ಡವರು ಈ ಬಗ್ಗೆ ಚಿಂತಿಸುವ ಅಗತ್ಯವಿದೆ.