ರಾಷ್ಟ್ರೀಯ

ಮೀಸಲಾತಿ ರದ್ದತಿ ತಡೆಯಲು ನೇಣಿಗೇರಲೂ ಸಿದ್ಧ: ಲಾಲು

Pinterest LinkedIn Tumblr

lalu-prasad-yadav1-2ಪಾಟ್ನಾ, ಸೆ.30: ಚುನಾವಣಾ ಪ್ರಚಾರ ಭಾಷಣದಲ್ಲಿ ಜಾತಿ ಸಂಬಂಧಿತ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತನ್ನ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆ ತಲೆ ಕೆಡಿಸಿಕೊಳ್ಳದ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರು, ತಾನು ‘ನೇಣಿಗೇರಲೂ’ಸಿದ್ಧನಿದ್ದೇನೆ. ಆದರೆ ಹಿಂದುಳಿದವರು ಮತ್ತು ದಲಿತರಿಗೆ ಮೀಸಲಾತಿಯನ್ನು ರದ್ದುಗೊಳಿಸಲು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಅವಕಾಶ ನೀಡುವುದಿಲ್ಲ ಎಂದು ಬುಧವಾರ ಇಲ್ಲಿ ಹೇಳುವ ಮೂಲಕ ಬಿಹಾರ ಚುನಾವಣೆಗೆ ತನ್ನ ಕಾರ್ಯಸೂಚಿಯಲ್ಲಿ ಮಂಡಲ್ ರಾಜಕೀಯವು ಪ್ರಮುಖ ಅಸ್ತ್ರವಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಹಿಂದುಳಿದ ವರ್ಗಗಳ ಉದ್ಧಾರಕನೆಂದೇ ಪರಿಗಣಿಸಲಾಗಿರುವ ಲಾಲು,ಬಿಹಾರ ಚುನಾವಣೆಯನ್ನು ‘ಜಂಗಲ್‌ರಾಜ್ 2’ ಮತ್ತು ‘ಮಂಡಲ್ ರಾಜ್ 2’ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಿದರು.ಬಿಜೆಪಿಯ ಜಂಗಲ್ ರಾಜ್ 2 ಘೋಷಣೆಗೆ ವಿರುದ್ಧವಾಗಿ ತಾನು ಮಂಡಲ್ ರಾಜ್ 2 ಘೋಷಣೆಯನ್ನು ಮೊಳಗಿಸುತ್ತಿದ್ದೇನೆ. ಇದರಲ್ಲಿ ಅಪರಾಧ ವೇನಿದೆ ಎಂದು ಲಾಲು ಸುದ್ದಿಗಾರರನ್ನು ಪ್ರಶ್ನಿಸಿದರು.

ರವಿವಾರ ರಾಘೋಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಲಾಲು, ವಿಧಾನಸಭಾ ಚುನಾವಣೆಯನ್ನು ‘ಹಿಂದುಳಿದ ವರ್ಗಗಳು ಮತ್ತು ಮುಂದುವರಿದ ವರ್ಗಗಳ ನಡುವಿನ ಹೋರಾಟ ’ಎಂದು ಬಣ್ಣಿಸಿದ್ದರಲ್ಲದೆ,ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಪರಾಭವಗೊಳಿಸಲು ತನ್ನ ಜಾತ್ಯತೀತ ಮೈತ್ರಿಕೂಟವನ್ನು ಬೆಂಬಲಿಸುವಂತೆ ಯಾದವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಂಗಳವಾರ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲು ಆದೇಶಿಸಿತ್ತು.

ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಜಂಗಲ್ ರಾಜ್ ಮರಳಲಿದೆ ಎಂದು ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಚಾರದ ಸಂದರ್ಭದಲ್ಲಿ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಚುರುಕಾಗಿ ಪ್ರತಿಕ್ರಿಯಿಸಿದ ಲಾಲು ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಅವರು ಮೀಸಲಾತಿಯ ಮರುವಿಮರ್ಶೆ ನಡೆಯಬೇಕೆಂದು ನೀಡಿದ್ದ ಹೇಳಿಕೆಯನ್ನು ಬಳಸಿಕೊಂಡು ಮಂಡಲ್ ರಾಜ್ ಅಸ್ತ್ರವನ್ನು ಝಳಪಿಸಿದ್ದಾರೆ. ಮೀಸಲಾತಿ ರಾಜ್ಯದಲ್ಲಿ ಸೂಕ್ಷ್ಮ ವಿಷಯವಾಗಿದ್ದು,ಮಂಡಲ್ ಆಯೋಗದ ವರದಿಯ ಹರಿಕಾರ ಬಿ.ಪಿ.ಮಂಡಲ್ ಇದೇ ರಾಜ್ಯಕ್ಕೆ ಸೇರಿದವರಾಗಿದ್ದಾರೆ.

Write A Comment