ರಾಷ್ಟ್ರೀಯ

ಗೋಮಾಂಸ ತಿಂದ ಆರೋಪ: ಥಳಿಸಿ ಓರ್ವನ ಕೊಲೆ

Pinterest LinkedIn Tumblr

cowಗ್ರೇಟರ್ ನೊಯ್ಡ (ಉತ್ತರ ಪ್ರದೇಶ), ಸೆ.30: ಮನೆಯಲ್ಲಿ ಗೋಮಾಂಸ ಅಡುಗೆ ಮಾಡಿದ್ದಾರೆ ಎಂಬ ವದಂತಿಯನ್ನು ಹರಡಿ, ಮನೆಯೊಂದಕ್ಕೆ ನೂರಾರು ಜನರ ಗುಂಪೊಂದು ನುಗ್ಗಿ 58ರ ಹರೆಯದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಿದ ಬಿಸದಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಈ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಂಧನವನ್ನು ವಿರೋಧಿಸಿ ಸಂಘಪರಿವಾರ ಕಾರ್ಯಕರ್ತರು ಬೀದಿಗಿಳಿದು ದಾಂಧಲೆ ನಡೆಸಿದ್ದಾರೆ.
ಮೃತನನ್ನು ಸ್ಥಳೀಯ ಇಕ್ಲಾಖ್ ಎಂದು ಗುರುತಿಸಲಾಗಿದೆ
. ಕುಟುಂಬದ ಇತರ ಸದಸ್ಯರಿಗೂ ಗಾಯಗಳಾಗಿವೆ. ಇಕ್ಲಾಖ್ ಅವರ ಹಿರಿಯ ಮಗ ಭಾರತೀಯ ವಾಯುಪಡೆಯಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ‘ನಾವು ಗೋಮಾಂಸ ಅಡುಗೆ ಮಾಡಿಲ್ಲ. ಸುಳ್ಳು ಆರೋಪ ಹೊರಿಸಿ ನನ್ನ ತಂದೆಯನ್ನು ಗುಂಪು ಥಳಿಸಿ ಕೊಂದು ಹಾಕಿದೆ’ ಎಂದು ಮೃತರ ಪುತ್ರಿ ತಿಳಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನತೆ ಆವರಿಸಿ, ಅದು ಹತ್ತಿರದ ಪ್ರದೇಶಗಳಿಗೂ ಹರಡುತ್ತಿದ್ದಂತೆಯೇ, ಸಂಘಪರಿವಾರದ ಇನ್ನೊಂದು ಗುಂಪು ಬಿಸದದಿಂದ ಕೇವಲ 5 ಕಿ.ಮೀ. ದೂರದ ಊಂಚಾ ಅಮೀರ್‌ಪುರದಲ್ಲಿ ಮಂಗಳವಾರ ಮುಂಜಾನೆ ದಾಂಧಲೆ ನಡೆಸಿದೆ. ಗ್ರಾಮದಲ್ಲಿ ಹಾಗೂ ಸುತ್ತಲ ಪ್ರದೇಶಗಳಲ್ಲಿ ಪ್ರಾದೇಶಿಕ ಸಶಸ್ತ್ರ ಪಡೆಯ ಒಂದು ತುಕಡಿ, ಗಾಝಿಯಾಬಾದ್, ಬುಲಂದ್‌ಶಹರ್ ಹಾಗೂ ಹಾಪುರಗಳಿಂದ ಪೊಲೀಸ್ ಬಲವನ್ನು ಕರೆಸಿ ನಿಯೋಜಿಸಲಾಗಿದೆಯೆಂದು ಗೌತಮಬುದ್ಧ ನಗರದ ಎಸ್ಪಿ ಕಿರಣ್ ಎಸ್. ತಿಳಿಸಿದ್ದಾರೆ.
ಹತ ಇಕ್ಲಾಖ್‌ನ ಕುಟುಂಬಿಕರು, ತಮ್ಮ ಸಣ್ಣ ಮನೆಯಲ್ಲಿ ಯಾವುದೇ ಹಸುವಿನ ವಧೆ ಮಾಡಿರುವುದನ್ನು ನಿರಾಕರಿಸಿದ್ದಾರೆ. ತಮ್ಮನ್ನು ಗುರಿಯಾಗಿಸಲು ಈ ಕತೆಯನ್ನು ಹೆಣೆಯಲಾಗಿದೆಯೆಂದು ಅವರು ಆರೋಪಿಸಿದ್ದಾರೆ. ಪೊಲೀಸರು ಸಕಾಲಕ್ಕೆ ಬರಲಿಲ್ಲ ಹಾಗೂ ನೆರೆಹೊರೆಯವರೂ ಸಹಾಯ ಮಾಡಲಿಲ್ಲವೆಂದು ಕುಟುಂಬಿಕರು ದೂರಿದ್ದಾರೆ.
ಇಕ್ಲಾಖ್ ಅಲ್ಲಿ ತನ್ನ 70ರ ಹರೆಯದ ತಾಯಿ ಅಸ್ಕರಿ, ಪತ್ನಿ ಇಕ್ರಮಾನ್ (52), ಕಿರಿಯ ಮಗ ದಾನಿಶ್(21) ಹಾಗೂ ಮಗಳೂ ಸಹಿಸ್ತಾ(16)ರ ಜೊತೆ ವಾಸಿಸುತ್ತಿದ್ದರು. ಅವರ ದೊಡ್ಡ ಮಗ ಸರ್ತಾಝ್ ಭಾರತೀಯ ವಾಯುದಳದಲ್ಲಿದ್ದು, ಪ್ರಕೃತ ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಾಳಿಯಲ್ಲಿ ದಾನಿಶ್‌ಗೆ ಗಂಭೀರ ಗಾಯಗಳಾಗಿವೆ.
ಸೋಮವಾರ ರಾತ್ರಿ ನೂರಾರು ಮಂದಿ ತಮ್ಮ ಮನೆಯ ಮುಂದೆ ಸೇರಿ ತಮ್ಮನ್ನು ಬೈಯಲಾರಂಭಿಸಿದರು. 10 ನಿಮಿಷಗಳ ಕಾಲ ಬಿಸಿಬಿಸಿ ವಾಗ್ವಾದ ನಡೆದ ಬಳಿಕ ಗುಂಪು ಹಿಂಸಾಚಾರಕ್ಕಿಳಿದು ಪ್ರಧಾನ ಬಾಗಿಲನ್ನು ಮುರಿದು ತೆರೆಯಿತು. ಅವರು ತನ್ನ ಸೊಸೆ ಹಾಗೂ ಮೊಮ್ಮಗಳೊಂದಿಗೆ ಕೆಟ್ಟದಾಗಿ ವರ್ತಿಸಿದರು. ಅವರು ನನ್ನನ್ನೂ ಬಿಡಲಿಲ್ಲ. ನಾನು ಶೌಚಾಲಯದೊಳಗೆ ಬಾಗಿಲು ಹಾಕಿಕೊಂಡು ಅಡಗಿದೆ. ಅವರು ಬಾಗಿಲು ಒಡೆದು ನನಗೆ ಥಳಿಸಿದರು. ಸುಮಾರು ಅರ್ಧಗಂಟೆಯ ಕಾಲ ದಾಳಿ ಮುಂದುವರಿಯಿತು. ಆದರೆ, ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಅವರು ನನ್ನ ಮಗ ಹಾಗೂ ಮೊಮ್ಮಗನಿಗೆ ಬರ್ಬರವಾಗಿ ಥಳಿಸಿದರು. ಬಳಿಕ, ನನ್ನ ಮಗನ ಶವವನ್ನು ಬೀದಿಗೆಳೆದೊಯ್ದು, ಅಲ್ಲಿ ಬಿಸಾಡಿ ಪಲಾಯನ ಮಾಡಿದರೆಂದು ಮೃತನ ತಾಯಿ ಅಸ್ಗರಿ ವಿವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಇಕ್ಲಾಖ್‌ನ ಶವವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ರೂಪೇಂದರ್, ವಿವೇಕ್, ಶೀಓಂ, ಸಂದೀಪ್, ಸೌರಭ್ ಹಾಗೂ ಗೌರವ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20 ವರ್ಷಗಳ ಆಸುಪಾಸಿನವರಾಗಿದ್ದಾರೆಂದು ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂಜಯ ಸಿಂಗ್ ತಿಳಿಸಿದ್ದಾರೆ.
‘ತಪ್ಪು ತಿಳುವಳಿಕೆ’ಯಿಂದ ದಾದ್ರಿ ಘಟನೆ: ಕೇಂದ್ರ ಸಚಿವ ಶರ್ಮಾ
ಹೊಸದಿಲ್ಲಿ: ಗೋಹತ್ಯೆಯಲ್ಲಿ ಶಾಮೀಲಾಗಿರುವ ವದಂತಿಗಳ ಹಿನ್ನೆಲೆಯಲ್ಲಿ ದಾದ್ರಿ ಪಟ್ಟಣದಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾದ ಘಟನೆ ತಪ್ಪು ತಿಳಿವಳಿಕೆಯಿಂದ ಸಂಭವಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಸೋಮವಾರ ರಾತ್ರಿ ಸಂಭವಿಸಿದ ಈ ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ಸಭೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ, ಸ್ಥಳೀಯ ಪೊಲೀಸರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ. ಇದೊಂದು ನೋವಿನ ಸಂಗತಿಯಾಗಿದೆ. ಎರಡೂ ಗುಂಪುಗಳು ಅದೇ ಗ್ರಾಮಕ್ಕೆ ಸೇರಿದ್ದಾಗಿವೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಸಚಿವರು ನುಡಿದರು. ಜೊತೆಗೆ, ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂಬ ವದಂತಿಗಳನ್ನು ಸಚಿವರು ತಳ್ಳಿ ಹಾಕಿದ್ದಾರೆ.
ನನ್ನ ತಂದೆ ಸಾಯುವವರೆಗೆ ಅವರು ಕಲ್ಲುಗಳಿಂದ ಹೊಡೆದರು: ಘಟನೆಯ ಬಗ್ಗೆ ಮೃತನ ಪುತ್ರಿಯ ವಿವರಣೆ
ರಾತ್ರಿ ಊಟದ ಬಳಿಕ ನನ್ನ ತಂದೆ ಮಲಗಲೆಂದು ಮೊದಲ ಮಹಡಿಯಲ್ಲಿದ್ದ ತನ್ನ ಕೋಣೆಗೆ ಹೋದರು. ಅವರು ಗೋವಧೆ ಮಾಡಿದ ಕಾರಣ ನಮ್ಮ ಮನೆಯ ಬಳಿ ಸೇರುವಂತೆ ಗ್ರಾಮಸ್ಥರನ್ನು ಕರೆಯುವ ಘೋಷಣೆಯು ಹತ್ತಿರದ ದೇವಾಲಯದ ಧ್ವನಿ ವರ್ಧಕದಿಂದ ಕೇಳಿಸಿತು.
ರಾತ್ರಿ 10:30ರ ವೇಳೆ 100ಕ್ಕೂ ಹೆಚ್ಚು ಮಂದಿ ದೊಣ್ಣೆ ಹಾಗೂ ಇಟ್ಟಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಮುತ್ತಿಗೆ ಹಾಕಿದರು. ಅವರು, ಬೈಯುತ್ತ ಪ್ರಧಾನ ಬಾಗಿಲು ಮುರಿದು ನಮ್ಮ ಮನೆಯೊಳಗೆ ನುಗ್ಗಿದರು. ಅವರು ತಳ ಅಂತಸ್ತಿನಲ್ಲಿ ಓದುತ್ತಿದ್ದ ನನ್ನ ಅಣ್ಣನನ್ನು ನಿರ್ದಯವಾಗಿ ಥಳಿಸಿದರು ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಬಳಿಕ ಅವರು ಮಾಳಿಗೆಗೆ ಹೋಗಿ ತಂದೆಯ ಮೇಲೆ ದಾಳಿ ನಡೆಸಿದರು. ದಾಳಿಕಾರರ ಗುಂಪು ಮನೆಯೊಳಗಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿತು.
ದುಷ್ಕರ್ಮಿಗಳು ತಂದೆಯನ್ನು ಗ್ರಾಮದ ಮುಖ್ಯ ಬೀದಿಗೆ ಎಳೆದೊಯ್ದರು. ಅವರು ತಂದೆಯ ಬಟ್ಟೆಗಳನ್ನು ಹರಿದರು. ಅವರನ್ನು ಬಿಟ್ಟು ಬಿಡುವಂತೆ ನಾವು ದಾಳಿಕಾರರಲ್ಲಿ ಅಂಗಲಾಚಿದೆವು. ಆದರೆ, ಅವರು ಕೇಳಲಿಲ್ಲ. ಅವರು ನನ್ನ ತಂದೆ ಸಾಯುವವರೆಗೆ ಅವರ ತಲೆ ಹಾಗೂ ಎದೆಗೆ ದೊಣ್ಣೆ ಹಾಗೂ ಇಟ್ಟಿಗೆಗಳಿಂದ ಥಳಿಸಿದರು. ಪೊಲೀಸ್ ವಾಹನದ ಸೈರನ್ ಕೇಳಿಸಿದೊಡನೆಯೇ ಗುಂಪು ಚದುರಿತು ಎಂದು ಮೃತ ಇಕ್ಲಾಖ್‌ರ ಪುತ್ರಿ ಮೆಹ್ರಾಝ್ ವಿವರಿಸಿದ್ದಾಳೆ.

Write A Comment