ಕೋಲ್ಕತಾ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಪಶ್ಚಿಮ ಬಂಗಾಳದ ಕೋಲ್ಕತಾ ಸೇರಿದಂತೆ ವಿವಿಧ ಕಡೆ ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡ ಸುಮಾರು 1 ಸಾವಿರ ಕೋಟಿಗೂ ಹೆಚ್ಚು ಹಣದ ಮೂಲದ ಬಗ್ಗೆ ವಿವಿರಗಳು ಲಭ್ಯವಾಗಿವೆ.
ಸುಮಾರು 60 ಗೋಣಿ ಚೀಲಗಳಲ್ಲಿ ಸಿಕ್ಕ ಭಾರಿ ಮೊತ್ತದ ಹಣ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ್ದು, ಭೂಗತ ಪಾತಕಿಯೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ತಮಿಳುನಾಡು ಮೂಲದ ಎಸ್. ನಾಗರಾಜನ್‌ನನ್ನು ಬಂಧಿಸಲಾಗಿದೆ.
ನಾಗರಾಜನ್ ಲಾಟರಿ ಕಿಂಗ್‌ಪಿನ್ ಸಾಂಟಿಗೋ ಮಾರ್ಟಿನ್ ಆಪ್ತನಾಗಿದ್ದು, ದೇಶಾದ್ಯಂತ ನಕಲಿ ಲಾಟರಿ ಜಾಲವನ್ನು ವಿಸ್ತರಿಸಿದ್ದ ಎನ್ನಲಾಗಿದೆ. ಅಲ್ಲದೆ ಈ ಹಣವನ್ನು ಕೋಲ್ಕತಾದಿಂದ ಯುಎಇಗೆ ಕಳುಹಿಸಲು ಎಲ್ಲಾ ತಯಾರಿ ನಡೆಸಿದ್ದ ಎನ್ನಲಾಗಿದೆ.
ಕೋಲ್ಕತಾದಲ್ಲಿ ಎರಡು ಲಾಟರಿ ಟಿಕೆಟ್ ಮಾರಾಟ ಅಂಗಡಿಗಳನ್ನು ಹೊಂದಿರುವ ನಾಗರಾಜನ್, ಟಿಕೆಟ್‌ಗಳನ್ನು ಸಂಗ್ರಹಿಸಲು ಕೋಲ್ಕತಾದ ಪ್ರತಿಷ್ಠಿತ ಪ್ರದೇಶಗಳಲ್ಲಿ ಏಳು ಮನೆಗಳನ್ನು ಹೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಲಾಟರಿ ಮತ್ತು ಹವಾಲಾ ದಂಧೆ ಹೆಚ್ಚುತ್ತಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಅದರಲ್ಲಿಯೂ ನಕಲಿ ಲಾಟರಿ ದಂಧೆ ನಡೆಯುತ್ತಿದೆ. ಇದರ ವ್ಯಾಪ್ತಿ ತಮಿಳುನಾಡಿಗೆ ತಲುಪಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದರ ಆಧಾರದ ಮೇಲೆ ಗುರುವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಕೊಲ್ಕೋತ್ತಾದಲ್ಲಿ ದಾಳಿ ನಡೆಸಿ ಹಣ ವಶಪಡಿಸಿಕೊಂಡಿದೆ.