ನವದೆಹಲಿ: ಕಳೆದ ಒಂದು ವಾರದಲ್ಲಿ ಮಾರಣಾಂತಿಕ ಡೆಂಗ್ಯೂ ಇಬ್ಬರು ಬಾಲಕರು ಬಲಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಕೇಜ್ರಿವಾಲ್ ದೆಹಲಿಯ ಆಸ್ಪತ್ರೆಗಳು ಬಾಲಕರನ್ನು ದಾಖಲಿಸಿಕೊಂಡು ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಇಬ್ಬರು ಬಾಲಕರು ಮೃತ ಪಟ್ಟಿದ್ದ ವಿಷಯ ತಿಳಿದು ತುಂಬಾ ಬೇಸರವಾಗಿದೆ. ಹೆಚ್ಚು ಹೆಚ್ಚು ಹಣ ಗಳಿಸುವಲ್ಲಿ ನಾವು ಮಾನವೀಯತೆಯನ್ನು ಮರೆತು ಕುರುಡರಾಗುತ್ತಿದ್ದೇವೆ ಎಂದು ವಿಷಾಧ ವ್ಯಕ್ತ ಪಡಿಸಿದರು. ಬಾಲಕರಿಗೆ ಚಿಕಿತ್ಸೆ ನೀಡಿದ್ದರೆ ಆಸ್ಪತ್ರೆಗಳು ಏನನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಮಗುವಿಗೆ ಚಿಕಿತ್ಸೆ ನೀಡಿದ್ದರೆ ಆಸ್ಪತ್ರೆಯ ಲಾಭ ಕಡಿಮೆ ಆಗುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ದೆಹಲಿಯಲ್ಲಿ ಇದುವರೆಗೂ ಡೆಂಗ್ಯೂ ಜ್ವರಕ್ಕೆ 10 ಮಂದಿ ಬಲಿಯಾಗಿದ್ದು, ಸುಮಾರು 1.800 ಮಂದಿ ಡೆಂಗ್ಯೂ ಸೋಂಕಿನಿಂದ ಬಳಲುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥ ಕೆಟ್ಟ ಪರಿಸ್ಥಿತಿ ತಲೆದೋರಿದೆ ಎಂದು ಕೇಜ್ರಿವಾಲ್ ಹೇಳಿದರು.
ಭಾನುವಾರ ಡೆಂಗ್ಯೂ ಜ್ವರಕ್ಕೆ ಆರು ವರ್ಷದ ಅಮಾನ್ ಶರ್ಮಾ ಎಂಬ ಬಾಲಕ ಬಲಿಯಾಗಿದ್ದ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅಮಾನ್ ಶರ್ಮಾ ನನ್ನು ಆತನ ತಂದೆ ಮಧ್ಯರಾತ್ರಿ 2.30 ರ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದರು. ಆದರೆ ದೆಹಲಿಯ ಆರು ಆಸ್ಪತ್ರೆಗಳು ಬಾಲಕನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದವು. ಇದರಿಂದ ಬಾಲಕ ಮೃತ ಪಟ್ಟಿದ್ದ. ಈ ಹಿನ್ನೆಲೆಯಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸಮನ್ಸ್ ನೀಡಿದೆ.