ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಗುಜರಾತ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಾರ್ದಿಕ್ ಪಟೇಲ್, ಪ್ರತಿಭಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 35 ಲಕ್ಷ ರೂಪಾಯಿ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.
ಪ್ರತಿಭಟನೆಯನ್ನು ತಿವ್ರಗೊಳಿಸುವುದಕ್ಕೆ ಸಿದ್ಧತೆ ನಡೆಸಿರುವ ಹಾರ್ದಿಕ್ ಪಟೇಲ್, ತನ್ನ ಸಮುದಾಯದ ರೈತರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡದಂತೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಪಟೇಲ್ ಸಮುದಾಯದ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ರನ್ನು ಅಮಾನತುಗೊಳಿಸಬೇಕು, ಆ ನಂತರ ಪ್ರತಿಭಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 35 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕೆಂದು ಹಾರ್ದಿಕ್ ಪಟೇಲ್ ಒತ್ತಾಯಿಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಸರ್ಕಾರ, ಪೊಲೀಸರು ಹಾಗೂ ಕೆಲ ಸಮಾಜ ವಿರೋಧಿಗಳೇ ಕಾರಣ, 55 ದಿನಗಳವರೆಗೆ ಪ್ರತಿಭಟನೆ ಶಾಂತವಾಗಿಯೇ ಮುಂದುವರೆದಿತ್ತು. ಆದರೆ ಜಿಎಂಡಿಸಿ ಮೈದಾನದಲ್ಲಿ ಪಟೇಲ್ ಸಮುದಾಯದ 20 ಲಕ್ಷಕ್ಕೂ ಹೆಚ್ಚು ಜನರು ಸೇರಿದಾಗ ಹಿಂಸಾಚಾರಕ್ಕೆ ರಾಜ್ಯ ಸರ್ಕಾರವೇ ಪ್ರಚೋದನೆ ನೀಡಿದೆ ಎಂದು ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.