ರಾಷ್ಟ್ರೀಯ

ಶೀನಾ ಹತ್ಯೆ; ಸಹೋದರ ಮೈಕೆಲ್ ಬೋರಾನಿಂದ ದೂರವಾಣಿ ಸಂಭಾಷಣೆ ಬಹಿರಂಗ ಸಾಧ್ಯತೆ

Pinterest LinkedIn Tumblr

mikhalಗುವಾಹತಿ: ಮಾಧ್ಯಮ ಲೋಕದ ಹೈಪ್ರೊಪೈಲ್ ಕುಟುಂಬವೊಂದರಲ್ಲಿ ನಡೆದ ನಿಗೂಢ ಸಾವು ಮತ್ತು ಸಂಬಂಧಗಳ ಪ್ರಕರಣ ದಿನಕ್ಕೊಂದು ತಿರವು ಪಡೆದುಕೊಳ್ಳುತ್ತಿದ್ದು, ಶೀನಾ ಬೋರಾ ಕೊಲೆಯನ್ನು ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸುವುದಾಗಿ ಆಕೆಯ ಸಹೋದರ ಮೈಕೆಲ್ ಬೋರಾ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುವಾಹತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮೈಕೆಲ್, ನನ್ನ ಬಳಿ ಪ್ರಕರಣಕ್ಕೆ ಸಂಬಂಧಿಸಿ ಫೋಟೋಗಳು ಹಾಗೂ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡಿದ ದಾಖಲೆಗಳಿವೆ ಎಂದಿದ್ದಾರೆ.

‘ಪೀಟರ್ ಮುಖರ್ಜಿ ಮತ್ತು ಶೀನಾ ಬೋರಾ ನಡೆಸಿದ ದೂರವಾಣಿ ಸಂಭಾಷಣೆಯ ಸಾಕ್ಷ್ಯ ನನ್ನ ಬಳಿ ಇದೆ’ ಎಂದು ಮೈಕೆಲ್ ತಿಳಿಸಿದ್ದಾರೆ. ಅಲ್ಲದೆ ನನ್ನ ಬಳಿ ರಾಹುಲ್ ಅವರ ಕೆಲವು ಫೋಟೋಗಳಿದ್ದು, ಅವುಗಳಿಂದ ರಾಹುಲ್ ಹಾಗೂ ಶೀನಾ ಸಂಬಂಧ ಎಂಥದ್ದು ಎಂಬುದು ಸಾಭೀತಾಗಲಿದೆ ಎಂದಿದ್ದಾರೆ.

‘ಒಂದು ವೇಳೆ ಇವತ್ತೇ ಪೊಲೀಸರು ಬಂದು ಸಾಕ್ಷ್ಯಗಳನ್ನು ಕೇಳಿದರೆ, ನಾನು ಈ ಕ್ಷಣವೇ ಕೊಡಲು ಸಿದ್ಧ’ ಎಂದು ಮೈಕೆಲ್ ತಿಳಿಸಿದ್ದಾರೆ.

ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಟಾರ್ ಟಿವಿ ಮಾಜಿ ಸಿಇಒ ಪೀಟರ್ ಮುಖರ್ಜಿ ಪತ್ನಿ ಹಾಗೂ 9ಎಕ್ಸ್ ಮಾಧ್ಯಮ ಸಮೂಹದ ಸಂಸ್ಥಾಪಕರಲ್ಲಿ ಒಬ್ಬರಾದ ಇಂದ್ರಾಣಿ ಮುಖರ್ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಜಟಿಲ ಸಂಬಂಧ: ಹತ್ಯೆಗೀಡಾದ ಶೀನಾ ಬೋರಾ (25), ಇಂದ್ರಾಣಿಗೆ ಮಾಜಿ ಪತಿಯಿಂದ ಜನಿಸಿದ ಮಗಳು. ಜತೆಗೆ ಇದೇ ಮದುವೆಯಿಂದ ಮೈಕೆಲ್‌ ಬೋರಾ ಎಂಬ ಮಗನಿದ್ದಾನೆ. ಇಂದ್ರಾಣಿ ಮೂರು ವಿವಾಹ ಆಗಿದ್ದಳು ಎನ್ನಲಾಗಿದ್ದು, 2002ರಲ್ಲಿ ಪೀಟರ್‌ ಮುಖರ್ಜಿ (ಹಾಲಿ ಪತಿ)ಅವರನ್ನು ಇಂದ್ರಾಣಿ ವಿವಾಹ (ಬಹುಶಃ ಇದು 3ನೇ ವಿವಾಹ) ಮಾಡಿಕೊಂಡಿದ್ದರು. ಪೀಟರ್‌ಗೂ ಅದು ಎರಡನೇ ವಿವಾಹವಾಗಿತ್ತಲ್ಲದೆ, ಹಿಂದಿನ ಮದುವೆಯಿಂದ ಅವರಿಗೆ ರಾಹುಲ್‌ ಎಂಬ ಪುತ್ರನಿದ್ದಾನೆ. ಶೀನಾ ಬೋರಾ ತನ್ನ ಮಗಳು ಎಂಬುದನ್ನು ಇಂದ್ರಾಣಿ ಅವರು ಪೀಟರ್‌ಗೆ ತಿಳಿಸಿರಲಿಲ್ಲ. ಆಕೆ ತನ್ನ ಸೋದರಿ ಎಂದು ಪೀಟರ್‌ ಹಾಗೂ ಮುಂಬೈನ ಪರಿಚಯಸ್ಥರಿಗೆಲ್ಲಾ ಹೇಳಿದ್ದರು.

ಈ ನಡುವೆ, ಇಂದ್ರಾಣಿ ಪುತ್ರಿ ಶೀನಾ ಹಾಗೂ ಪೀಟರ್‌ ಪುತ್ರ ರಾಹುಲ್‌ ನಡುವೆ ಸಂಬಂಧವೇರ್ಪಟ್ಟಿತ್ತು. ಇದು ಇಂದ್ರಾಣಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ಸಂಬಂಧವನ್ನು ತಪ್ಪಿಸುವ ಸಲುವಾಗಿ “ಸೋದರಿ’ಯನ್ನು ಅಮೆರಿಕಕ್ಕೆ ಕಳುಹಿಸುತ್ತಿರುವುದಾಗಿ ಪೀಟರ್‌ಗೆ ಇಂದ್ರಾಣಿ ತಿಳಿಸಿದ್ದರು. ಮೂರು ವರ್ಷಗಳ ಹಿಂದೆಯೇ ಶೀನಾ ನಾಪತ್ತೆಯಾಗಿದ್ದರೂ ಪ್ರಕರಣ ದಾಖಲಿಸಿರಲಿಲ್ಲ. “ಸೋದರಿ’ ಅಮೆರಿಕದಲ್ಲಿದ್ದಾಳೆ ಎಂದು ಪೀಟರ್‌ಗೆ ನೆಪ ಹೇಳಿದ್ದರು ಎಂದು ಮೂಲಗಳನ್ನು ಉಲ್ಲೇಖೀಸಿ ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ, ಇಂದ್ರಾಣಿಗೆ ಶೀನಾ ಸೋದರಿಯಲ್ಲ, ಮಗಳು ಎಂದು ಒಂದು ಹಂತದಲ್ಲಿ ಪುತ್ರ ರಾಹುಲ್‌ ನನಗೆ ಹೇಳಿದ್ದ. ಆದರೆ ನಾನು ನಂಬಿರಲಿಲ್ಲ. ಅದಾದ ಮೂರು ವರ್ಷದಿಂದ ಪುತ್ರ ನನ್ನ ಜತೆ ಮಾತನಾಡುತ್ತಿಲ್ಲ ಎಂದು ಪೀಟರ್‌ ಹೇಳಿದ್ದಾರೆ.

Write A Comment