ಹೊಸದಿಲ್ಲಿ: ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ಕೆಂಪು ಸಿಗ್ನಲ್ ಇರುವಾಗ ಯುವತಿಯೊಬ್ಬಳಿಗೆ ನಿಂದಿಸಿ, ದೂರು ಸಲ್ಲಿಸುವುದಾಗಿ ಹೇಳಿದಾಗ ಫೋಸ್ ಕೊಟ್ಟಿದ್ಲಲ್ಲದೇ, ‘ಧೈರ್ಯವಿದ್ದರೆ ದೂರು ಕೊಡು’ ಎಂದು ಧಮಕಿ ಹಾಕಿದ್ದಾನೆ. ಆಗ ಆ ಸ್ಥಳದಲ್ಲಿ 20ಕ್ಕೂ ಹೆಚ್ಚು ಮಂದಿ ಇದ್ದರೂ ಒಬ್ಬರೂ ಸಹಾಯಕ್ಕೆ ಬರಲಿಲ್ಲವೆಂದು, ನೊಂದ ಯುವತಿ ವ್ಯಕ್ತಿಯ ಫೋಟೋದೊಂದಿಗೆ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದು, ಅಪಾರ ಪ್ರತಿಕ್ರಿಯೆ ಸಿಗುತ್ತಿದೆ.
ಜಸ್ಲೀನ್ ಕೌರ್ ಎಂಬ ಯುವತಿ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾನುವಾರ ರಾತ್ರಿ ತಮ್ಮ ಅಳಲನ್ನು ತೋಡಿಕೊಂಡಿದ್ದು, 75 ಮಂದಿ ಲೈಕ್ ಮಾಡಿದ್ದು, ಸುಮಾರು 14,500ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.
ಘಟನೆ ಬಗ್ಗೆ ಯುವತಿ ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದು, ಆಕೆಯ ಧೈರ್ಯಕ್ಕೆ ಮೆಚ್ಚಿದ ಪೊಲೀಸರು 5,000 ರೂ. ಬಹುಮಾನ ನೀಡಿದ್ದಾರೆ. ವ್ಯಕ್ತಿಯ ಬೈಕ್ ನಂಬರ್ ಹಾಗೂ ಇತರೆ ಮಾಹಿತಿಗಳಿದ್ದು, ಶೋಧ ಕಾರ್ಯ ಮುಂದುವರಿದಿದೆ.
‘ವ್ಯಕ್ತಿಯೊಬ್ಬ ಟ್ರ್ಯಾಫಿಕ್ ಸಿಗ್ನಲ್‌ನಲ್ಲಿಯೇ ನನ್ನ ಮೇಲೆ ಅಶ್ಲೀಲವಾಗಿ ಟೀಕಿಸಿದ. ಸಿಲ್ವರ್ ರಾಯಲ್ ಫೀಲ್ಡ್‌ನಲ್ಲಿದ್ದ ಆತನ ವಾಹನ ಸಂಖ್ಯೆ, ಡಿಎಲ್ 4ಎಸ್ ಸಿಇ 3623. ನಾನು ಆತನ ಫೋಟೋ ತೆಗೆದುಕೊಂಡು, ದೂರು ದಾಖಲಿಸುವೆ ಎಂದಾಗ, ಫೋಸ್ ನೀಡಿ, ‘ಏನೇನು ಮಾಡ್ಲಿಕ್ಕಾಗತ್ತೋ ಮಾಡು. ಆಮೇಲೆ ನೋಡು ಏನು ಮಾಡ್ತೀನಿ ಎಂದು,’ ಧಮ್ಕಿ ಹಾಕಿದ್ದಾನೆ,’ ಎಂದು ಜಸ್ಲೀನ್ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾಳೆ.
‘ಆ ವ್ಯಕ್ತಿಯ ಅಶ್ಲೀಲ ಟೀಕೆಗಳಿಗಿಂತಲೂ, ಅಲ್ಲಿಯೇ ಇದ್ದ 20 ಮಂದಿ ಯಾವುದೇ ಸಹಾಯಕ್ಕೆ ಬಾರದೇ ಹೋಗಿದ್ದು ತೀವ್ರ ದುಃಖ ತಂದಿದೆ,’ ಎಂದು ನೋವು ಹಂಚಿಕೊಂಡಿದ್ದಾಳೆ.
‘ವ್ಯಕ್ತಿಯ ತಪ್ಪಿಗಾಗಿ ಆತನಿಗೆ ಅವಮಾನವಾಗಬೇಕು, ನಾನೇಕೆ ಹೆದರಲಿ,’ ಎಂದು ಮಾಧ್ಯಮದೊಂದಿಗೆ ಮಾತನಾಡಿ, ಹೇಳಿಕೊಂಡಿದ್ದಾಳೆ.