ದೆಹಲಿಯಿಂದ ಬೆಂಗಳೂರಿಗೆ 164 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಏರ್ ಇಂಡಿಯಾ ವಿಮಾನ ಇಳಿಯುವ ಸಮಯದಲ್ಲಿ ಟಯರ್ ಸ್ಪೋಟಗೊಂಡ ಘಟನೆ ನಡೆದಿದ್ದು ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಇಲ್ಲಿನ ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ 4.21ರ ಹೊತ್ತಿಗೆ ಇಳಿಯುವ ಸಮಯದಲ್ಲಿ ವಿಮಾನದ ಟಯರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ವಿಮಾನವು ಸುರಕ್ಷಿತವಾಗಿ ಕೆಳಗಿಳಿದ ತಕ್ಷಣ ಅದರೊಳಗಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಗಿದ್ದು ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ವಿಮಾನದ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ತನ್ನ ಮರು ಪ್ರಯಾಣವನ್ನು ಸಂಜೆ ಐದು ಗಂಟೆಗೆ ಕೈಗೊಳ್ಳಬೇಕಾಗಿದ್ದ ಈ ವಿಮಾನವು ರಾತ್ರಿ 8.40ಕ್ಕೆ ಪ್ರಯಾಣ ಆರಂಭಿಸಿತು ಎಂಬ ಮಾಹಿತಿ ಲಭಿಸಿದೆ.