ಪುಣೆ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯೊಂದಿಗೆ ಎಫ್‌ಟಿಐಐ ಹೋರಾಟ ಈಗ ಪೂರ್ಣ ರಾಜಕೀಯ ವಿಷಯವಾಗಿ ಪರಿವರ್ತನೆಯಾಗಿದೆ.
ಶುಕ್ರವಾರ ಎಫ್‌ಟಿಐ (ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ) ಗೆ ಭೇಟಿ ನೀಡಿದ ರಾಹುಲ್‌ಗಾಂಧಿ, ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರು.
”ಯೋಗ್ಯತೆ ಪಡೆಯಲು ಯತ್ನಿಸುವ ಜನರ ಮೇಲೆ ಯೋಗ್ಯತೆಯಿಲ್ಲದ ವ್ಯಕ್ತಿಯನ್ನು ತಂದು ಕೂರಿಸಲಾಗಿದೆ. ಆರ್‌ಎಸ್‌ಎಸ್ ಮತ್ತದರ ಅಂಗಸಂಸ್ಥೆಗಳು ಎಲ್ಲೆಲ್ಲೂ ಅಯೋಗ್ಯತೆಯನ್ನೇ ಪ್ರಚುರಪಡಿಸುತ್ತಿವೆ,” ಎಂದು ರಾಹುಲ್ ಗಾಂಧಿ ಟೀಕಿಸಿದರು.
”ಗಜೇಂದ್ರ ಚೌಹಾಣ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರೇ ಆರಿಸಿದ್ದರೆ ಅವರನ್ನು ಬದಲಾಯಿಸಲು ಬಿಜೆಪಿಯಲ್ಲಿ ಯಾರಿಂದಲೂ ಸಾಧ್ಯವಿಲ್ಲ,” ಎಂದು ರಾಹುಲ್ ಕುಟುಕಿದರು.
ಜೂನ್ 12ರಿಂದ ಪ್ರತಿಭಟನೆ ನಡೆಸುತ್ತಿರುವ ಎಫ್‌ಟಿಐಐ ವಿದ್ಯಾರ್ಥಿಗಳು, ಸಂಸ್ಥೆಯ ಮುಖ್ಯಸ್ಥರನ್ನಾಗಿ ಗಜೇಂದ್ರ ಚೌಹಾಣ್ ಮತ್ತು ಇತರ ಐವರು ಸದಸ್ಯರ ನೇಮಕದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್ ನಂಟಿರುವ ಇವರನ್ನು ಯೋಗ್ಯತೆ ಇಲ್ಲದಿದ್ದರೂ ಎಫ್‌ಟಿಐಐಗೆ ನೇಮಿಸಲಾಗಿದೆ ಎನ್ನುವುದು ವಿದ್ಯಾರ್ಥಿಗಳ ಆರೋಪ.
ಹಲವು ಸಂಘಟನೆಗಳು, ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಜತೆ ಸೇರಿ ಎಫ್‌ಟಿಐಐ ವಿದ್ಯಾರ್ಥಿಗಳು ಸೋಮವಾರ ದಿಲ್ಲಿಯ ಜಂತರ್‌ಮಂತರ್‌ನಿಂದ ಸಂಸತ್ ಭವನದವರೆಗೆ ಪ್ರತಿಭಟನಾ ರ‌್ಯಾಲಿ ಹಮ್ಮಿಕೊಂಡಿದ್ದಾರೆ.
ಗಜೇಂದ್ರ ಚೌಹಾಣ್ ಮತ್ತು ಇತರ ಸದಸ್ಯರನ್ನು ವಜಾ ಮಾಡಿ ಸೊಸೈಟಿಯನ್ನು ವಿಸರ್ಜಿಸುವಂತೆ ವಿದ್ಯಾರ್ಥಿಗಳು ಅರುಣ್ ಜೇಟ್ಲಿ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿತ್ತು. ಮಧ್ಯಪ್ರವೇಶಿಸಲು ಕೋರಿ ಪ್ರಧಾನಿಗೆ ಬರೆದ ಪತ್ರಕ್ಕೆ ಉತ್ತರ ಬರಲಿಲ್ಲ. ನಂತರ, ಎಲ್ಲಾ ಸಂಸತ್ ಸದಸ್ಯರಿಗೂ ಪತ್ರ ಬರೆದು ಸದನದಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಕೋರಿದ್ದರು.