ಹೊಸದಿಲ್ಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್‌ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಕಿಡಿ ಕಾರಿದ್ದಾನೆ.
ಇದು ಸರಕಾರಿ ಪ್ರಾಯೋಜಿತ ಕಾನೂನು ಪ್ರಕಾರ ನಡೆದ ಹತ್ಯೆ. ಆತ ಭಾರತಕ್ಕೆ ಮರಳಿದಾಗ ಕೇಂದ್ರ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸದೆ ನಂಬಿಕೆ ದ್ರೋಹ ಮಾಡಿದೆ. ಇದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಕೀಲ್ ಎಚ್ಚರಿಕೆ ನೀಡಿದ್ಧಾನೆ.
ಗುರುವಾರ ನಡೆದ ಬೆಳವಣಿಗೆಗಳಿಂದ ಕ್ರುದ್ಧನಾಗಿರುವ ಛೋಟಾ ಶಕೀಲ್, ವಿಕ ಸೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಕರೆ ಮಾಡಿ ತನ್ನ ಬೇಗುದಿಯನ್ನು ಹೊರಹಾಕಿದ್ದಾನೆ. ಇದು ಅಪ್ಪಟ ನಂಬಿಕೆ ದ್ರೋಹ. ಒಂದು ವೇಳೆ ದಾವುದ್ ಕೂಡ ಸರಕಾರದ ಮಾತು ನಂಬಿ ಬಂದಿದ್ದರೆ ಇದೇ ಗತಿಯಾಗುತ್ತಿತ್ತು. ಅದೀಗ ಸ್ಪಷ್ಟವಾಗಿದೆ ಎಂದು ಹೇಳಿದ್ದಾನೆ.
ಸೋದರನ ತಪ್ಪಿಗೆ ಅಮಾಯಕನನ್ನು ಶಿಕ್ಷಿಸಲಾಗಿದೆ. ಇದರಿಂದ ಭಾರತ ಸರಕಾರ ಎಂಥ ಸಂದೇಶವನ್ನು ಹೊರಹೊಮ್ಮಿಸಿದೆ? ಡಿ ಕಂಪನಿ ಈ ಕೃತ್ಯವನ್ನು ಖಂಡಿಸುತ್ತದೆ. ಇದೊಂದು ಕಾನುನುಬದ್ಧವಾದ ಹತ್ಯೆಯಾಗಿದೆ. ಇದಕ್ಕಾಗಿ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದು ಕಿಡಿ ಶಕೀಲ್ ಕಿಡಿ ಕಾರಿದ್ದಾನೆ.
1993ರ ಮಾರ್ಚ್‌ನಲ್ಲಿ ಮುಂಬಯಿಯಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಕುಬ್‌ನ ಸೋದರ ಬೆಳ್ಳಿ ಕಳ್ಳಸಾಗಣೆದಾರ ಟೈಗರ್ ಮೆಮೊನ್ ಜತೆ ಸಂಚಿನಲ್ಲಿ ಛೋಟಾ ಶಕೀಲ್ ಕೂಡ ಭಾಗಿಯಾಗಿದ್ದ ಎನ್ನಲಾಗುತ್ತದೆ.
ಸರಣಿ ಸ್ಫೋಟದಲ್ಲಿ ಟೈಗರ್ ಮೆಮೊನ್ ನಿಜವಾದ ಅಪರಾಧಿ. ಯಾಕುಬ್ ಅಮಾಯಕ. ಈತನನ್ನು ಕೃತ್ಯ ನಡೆಸಲು ಪುಸಲಾಯಿಸಿ ಒತ್ತಾಯಿಸಿದ್ದು ಟೈಗರ್ ಮೆಮೊನ್. ಆದರೆ ಸೋದರನ ಕೃತ್ಯಕ್ಕೆ ಯಾಕುಬ್ ಬಲಿಯಾದ ಎಂದು ಶಕೀಲ್ ದೂರಿದ್ಧಾನೆ.
ಭವಿಷ್ಯದಲ್ಲಿ ಡಿ ಕಂಪನಿಯ ಯಾವೊಬ್ಬನೂ ಸರಕಾರದ ಆಮಿಷಗಳಿಗೆ ಬಲಿಯಾಗುವುದಿಲ್ಲ. ಯಾರೊಬ್ಬನೂ ಭಾರತದ ಸರಕಾರದ ಇಲಾಖೆಗಳು, ಅಧಿಕಾರಿಗಳನ್ನು ನಂಬುವುದಿಲ್ಲ ಎಂದು ಶಕೀಲ್ ಹೇಳಿದ್ದಾನೆ.