ರಾಷ್ಟ್ರೀಯ

ನೇಣುಗಂಬ ಏರುವ ಮುನ್ನ ಸೋದರರನ್ನು ಭೇಟಿಯಾಗಿದ್ದ ಯಾಕೂಬ್‌

Pinterest LinkedIn Tumblr

yakoob

ನಾಗ್ಪುರ: 54ನೇ ಹುಟ್ಟುಹಬ್ಬದ ದಿನವೇ ಗಲ್ಲಿಗೇರಿದ ಮುಂಬಯಿ ಸರಣಿ ಸ್ಫೋಟದ ದೋಷಿ ಯಾಕೂಬ್‌ ಮೊಮೊನ್‌, ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಬುಧವಾರ ರಾತ್ರಿ ಕಡೆಯ ಬಾರಿಗೆ ಅಣ್ಣ ಸುಲೇಮಾನ್‌ ಹಾಗೂ ಸೋದರ ಸಂಬಂಧಿ ಉಸ್ಮಾನನ್ನು ಭೇಟಿ ಆಗಿದ್ದ.

ಜೈಲಿನ ಮುಲಾಕಾತ್‌ ಕೊಠಡಿಯಲ್ಲಿ ಸ್ಥಳೀಯ ವಕೀಲ ಅನಿಲ್‌ ಗೆಡಂ ಹಾಗೂ ಸೋದರನನ್ನು ಕಡೆಯ ಬಾರಿಗೆ ಭೇಟಿ ಆದ ಯಾಕೂಬ್‌, ಸದ್ಯದ ಬೆಳವಣಿಗಳು, ಕಾನೂನಿನಲ್ಲಿರುವ ಇತರ ಸಾಧ್ಯತೆಗಳ ಕುರಿತು ಚರ್ಚಿಸಿದ್ದ.

ಪುಣೆಯ ಯರವಾಡ ಜೈಲಿನಿಂದ 2007ರ ಆಗಸ್ಟ್‌ನಲ್ಲಿ ನಾಗ್ಪುರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ ಯಾಕೂಬ್‌ ಗಲ್ಲಿಗೇರುವ ಮೊದಲು ಅದೇ ಜೈಲಿನಲ್ಲಿ 7 ವರ್ಷ, 11 ತಿಂಗಳು 17 ದಿನ ಕಳೆದಿದ್ದ. ಹೊರಗಿನ ಜನರಿಗೆ ತನ್ನ ಮನದಾಳದ ತುಮುಲಗಳನ್ನು ತೋರಿಸಿಕೊಳ್ಳದ ಬಿಳಿ ಗಡ್ಡದ ಯಾಕೂಬ್‌ ಬುಧುವಾರ ಮಾತ್ರ ಊಟ ನಿರಾಕರಿಸಿದ್ದ.

ರಾಜ್ಯಶಾಸ್ತ್ರ , ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಚಾರ್ಟೆಡ್‌ ಅಕೌಂಟೆಂಟ್‌ಯಾಕೂಬ್‌, ಇಂಗ್ಲಿಷ್‌ ಕಲಿಸುವ ಮೂಲಕ ಸಹ ಕೈದಿಗಳ ವಿಶ್ವಾಸ ಗಳಿಸಿದ್ದ. ಯಾಕೂಬ್‌ಗೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿ ಹಲವರು ನಿರಶನವನ್ನೂ ನಡೆಸಿದ್ದರು.

ನೇಣುಗಂಬ ಏರುವ ಸಂದರ್ಭದಲ್ಲಿ ಹಾಜರಿರುವಂತೆ ಯಾವ ಮೌಲ್ವಿಗೂ ಆಹ್ವಾನ ನೀಡಿರಲಿಲ್ಲ ಎಂದು ನಾಗ್ಪುರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಸಂದರ್ಭದಲ್ಲಿ ಯಾಕೂಬ್‌ ಶಾಂತ ಚಿತ್ತನಾಗಿರಬೇಕು. ಸಾವಿನ ನೋವನ್ನು ಭರಿಸಲು ನೆರವಾಗುವಂಥ ಕುರಾರಿನ ಸಾಲುಗಳನ್ನು ಓದುವ ಅಗತ್ಯ ಇತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Write A Comment