ರಾಷ್ಟ್ರೀಯ

ಕಲಾಂ ಅಂತಿಮ ದರ್ಶನಕ್ಕೆ ಸಾಲುಗಟ್ಟಿದ ಸಾವಿರಾರು ಮಂದಿ

Pinterest LinkedIn Tumblr

peopleರಾಮೇಶ್ವರಂ: ತಮಿಳುನಾಡಿನ ರಾಮೇಶ್ವರದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಮಂದಿ ಹಾಜರಾಗಿದ್ದಾರೆ.

ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಆಗಮಿಸಿದ್ದು, ಸಾಲುಗಟ್ಟಿ ನಿಂತಿದ್ದಾರೆ. ಕಲಾಂ ಅವರ ಮಾತುಗಳಿಂದ ಸ್ಪೂರ್ತಿಗೊಂಡ ಅನೇಕರು ಬಿರು ಬಿಸಿಲು ಎಂಬುದನ್ನು ನೋಡದೆ ಕಲಾಂ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದಾರೆ.

ಇನ್ನು ಕಲಾಂ ಅವರ ಅಂತಿಮ ಸಂಸ್ಕಾರ ಹುಟ್ಟೂರಾದ ರಾಮೇಶ್ವರದಲ್ಲಿ ನಾಳೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಸಾವಿರಾರು ಮಂದಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಮೇಶ್ವರದಿಂದ 12 ಕಿ.ಮೀ ದೂರದಲ್ಲಿರುವ ಪಕರಂಬು ಎಂಬಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ.

ಅಂತ್ಯ ಸಂಸ್ಕಾರಕ್ಕೆ ಮೊದಲು ಕುಟುಂಬದ ಆಪ್ತರು ಮೃತದೇಹ ಸ್ನಾನ ಮಾಡಿಸಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ಅಂತ್ಯಸಂಸ್ಕಾರ ನಡೆಸುವ ಸ್ಥಳಕ್ಕೆ ಕೊಂಡೊಯ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಲಾಂ ಅವರ ಅಣ್ಣನ ಮಗ ಸಲೀಂ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಲಿದೆ. ಕಲಾಂ ಅವರ ಹಿರಿಯ ಸಹೋದರ ಮುತ್ತು ಮುಹಮ್ಮದ್ ಮೀರಾನ್ ಅವರ ಸಲಹೆಯಂತೆ ಕಲಾಂ ಅವರ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಲಿರುವ ಕಲಾಂ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ನಾಳೆ ಬೆಳಿಗ್ಗೆ 7.30ಕ್ಕೆ ನಗರದಿಂದ ವಿಶೇಷ ವಿಮಾನದಲ್ಲಿ ಚೆನ್ನೈಗೆ ತೆರಳಿ ಅಲ್ಲಿಂದ ರಸ್ತೆ ಮೂಲಕ ರಾಮೇಶ್ವರಂ ತಲುಪಲಿದ್ದಾರೆ.

Write A Comment