ಸೋಮವಾರ ಪಂಜಾಬ್ ನ ಗುರುದಾಸ್ ಪುರದಲ್ಲಿ ದಾಳಿ ನಡೆಸಿದ ಭಯೋತ್ಪಾದಕರು ಬಳಸಿದ್ದು ಚೀನಾದಲ್ಲಿ ತಯಾರಿಸಲಾದ ಗ್ರೆನೇಡ್ ಎಂಬ ಮಾಹಿತಿ ಲಭ್ಯವಾಗಿದ್ದು ಆ ಮೂಲಕ ಚೀನಾ, ಪಾಕ್ ಉಗ್ರರ ಜತೆ ಸೇರಿ ಭಾರತವನ್ನು ಬಗ್ಗು ಬಡಿಯಲು ಮುಂದಾಗಿದೆಯಾ ಎಂಬ ಅನುಮಾನ ಬಲವಾಗಿ ಕಾಡತೊಡಗಿದೆ.
ದಾಳಿ ಪ್ರದೇಶಕ್ಕೆ ಇಂದು ಫೋರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಸಮಯದಲ್ಲಿ ಸಿಕ್ಕ ಗ್ರೆನೇಡ್ ಗಳು ಚೀನಾ ಉತ್ಪಾಧಿಸಿದ್ದು ಎಂಬ ಅಂಶ ಬಯಲಾಗಿದೆ. ಅಲ್ಲದೇ ಈ ಉಗ್ರರ ದಾಳಿಯಲ್ಲಿ ಪಾಕ್ ನ ಪಾತ್ರ ಕಂಡು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಪಾಕ್ ಜತೆ ಚೀನಾ ಸಹ ಭಯೋತ್ಪಾದಕರ ಬೆಂಬಲಕ್ಕೆ ನಿತಿರುವ ಸಂಶಯ ವ್ಯಕ್ತವಾಗಿದೆ.
ಸೋಮವಾರ ಬೆಳಗ್ಗೆ 5 ಗಂಟೆಗೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಎಸ್ ಪಿ ಸೇರಿದಂತೆ ಐವರು ಪೊಲೀಸರು, ಮೂವರು ನಾಗರಿಕರು ಮತ್ತು ಶಂಕಿತ ಲಷ್ಕರ ಎ ತೊಯ್ಬಾ ಉಗ್ರರ ಸಂಘಟನೆಯ ಮೂವರು ಉಗ್ರರು ಸೇರಿ 11 ಮಂದಿ ಅಸುನೀಗಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದು.