ರಾಷ್ಟ್ರೀಯ

ಇರೋ ಜೈಲಲ್ಲಿ ಬೋರು ಅಂತ ಹಳೇ ಸೆರೆಮನೆಗೆ ಪರಾರಿಯಾದ ಕೈದಿ ! ಮುಂದೇನಾಯಿತು …ನೀವೇ ಓದಿ…

Pinterest LinkedIn Tumblr

jail

ಭೋಪಾಲ್‌: ಕೊಲೆ ಮಾಡಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 22 ವರ್ಷ ಕೈದಿಯೊಬ್ಬರ ಬೇಸರವಾಗುತ್ತಿದೆ ಎಂದು ಒಂದು ಜೈಲಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ತಲುಪಿದ್ದು ಇನ್ನೊಂದು ಸೆರೆಮನೆಗೆ!

ಹಾಗಂತ, ಆತನನ್ನು ಪೊಲೀಸರು ಮತ್ತೆ ಬಂಧಿಸಿ ಇನ್ನೊಂದು ಸೆರೆಮನೆಗೆ ಹಾಕಿದ್ದಲ್ಲ. ಕೈದಿಯೇ ಖುದ್ದಾಗಿ ಇನ್ನೊಂದು ಜೈಲಿನ ಬಾಗಿಲು ಬಡಿದು ನನ್ನನ್ನು ಸೇರಿಸಿಕೊಳ್ಳಿ ಎಂದು ಗೋಗರೆದಿದ್ದಾನೆ. ಈ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ.

ಏನಾಗಿತ್ತು?

ಪಂಕಜ್‌ ಪಹಾಡೆ ಎನ್ನುವ ಯುವಕ ಛಿಂಡ್ವಾರಾ ಜಿಲ್ಲೆಯ ಟರ್ಕಿಖಾಪ ಎಂಬ ಗ್ರಾಮದವನು. ಆತ ತನ್ನ ಚಿಕ್ಕಮ್ಮನನ್ನು 2013ರಲ್ಲಿ ಕೊಲೆ ಮಾಡಿದ್ದ. ಆತನನ್ನು ಆರಂಭದಲ್ಲಿ ಛಿಂಡ್ವಾರಾ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಆತನ ಸಂಬಂಧಿಕರು, ಸ್ನೇಹಿತರು ಆಗಾಗ ಭೇಟಿ ನೀಡುತ್ತಿದ್ದರು. ಪಂಕಜ್‌ ಕೈದಿಯಾಗಿ ಅಲ್ಲಿ ನೆಮ್ಮದಿಯಾಗಿದ್ದ.

ಆದರೆ ಯಾವಾಗ ವಿಚಾರಣೆ ನಡೆದು ಜೀವಾವಧಿ ಶಿಕ್ಷೆಗೂ ಗುರಿಯಾದನೋ ಆಗ ಅಲ್ಲಿನ ಕಾನೂನು ಪ್ರಕಾರ, ಆತನನ್ನು ಆತನಿದ್ದ ಪಟ್ಟಣದಿಂದ 130 ಕಿಮೀ ದೂರದ ನರಸಿಂಹಪುರ ಬಂದೀಖಾನೆಗೆ ಹಾಕಲಾಗಿತ್ತು. ಅದು ತುಂಬ ದೂರವಾಗಿರುವ ಹಿನ್ನೆಲೆಯಲ್ಲಿ ಯಾರೂ ಆತನನ್ನು ಭೇಟಿ ಮಾಡಲು ಬರುತ್ತಿರಲಿಲ್ಲವಂತೆ. ಇದರಂತೆ ಬೇಸತ್ತ ಆತ ತಮ್ಮವರನ್ನು ನೋಡಲು ನಿರ್ಧರಿಸಿದ.

ನರಸಿಂಹಪುರ ಜೈಲಿಂದ ಪರಾರಿಯಾಗಿ ತನ್ನ ಸ್ವಂತ ಊರು ಛಿಂಡ್ವಾರಾ ತಲುಪಿದ. ತನ್ನವರನ್ನು ಭೇಟಿಯಾದ. ಮರುದಿನವೇ ಬೆಳಗ್ಗೆ ಛಿಂಡ್ವಾರಾ ಜಿಲ್ಲಾ ಕಾರಾಗೃಹಕ್ಕೆ ಬಂದು ನನ್ನನ್ನು ಇಲ್ಲೇ ಇಟ್ಟುಕೊಳ್ಳಿ. ನರಸಿಂಹಪುರ ಜೈಲು ನನಗೆ ಬೇಡ ಎಂದು ಅಧಿಕಾರಿಗಳಿಗೆ ಮೊರೆಯಿಟ್ಟ. ಹಾಗಾಗಲ್ಲ ಕಣಪ್ಪ. ಕಾನೂನು ಪ್ರಕಾರ ನಿನ್ನನ್ನು ಇಲ್ಲಿ ಇಡಕ್ಕಾಗಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ಹೇಳಿದರೂ, ಇಲ್ಲ, ಅಲ್ಲಿ ನನಗೆ ಬೋರಾಗುತ್ತದೆ. ನನ್ನವರಿಗೆ ಬರೋಕಾಗಲ್ಲ, ಇಲ್ಲೇ ಇರಲು ಬಿಡಿ ಎಂದು ಗೋಗರೆದಿದ್ದಾನೆ.

ನೀನು ಇಲ್ಲಿಗೇ ಬರಬೇಕಿದ್ದರೆ, ಕಾನೂನು ಪ್ರಕಾರ ಮನವಿ ಮಾಡಬೇಕಿತ್ತು, ಜೈಲಿಂದ ಪರಾರಿ ಏಕಾದೆ ಎಂದು ಪ್ರಶ್ನಿಸಿದ ಅಧಿಕಾರಿಗಳು, ಈಗ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲಿಂದ ಪರಾರಿಯಾದ ಪ್ರಕರಣ ಆತನ ಮೇಲೆ ದಾಖಲಾಗಿದೆ.

Write A Comment