ರಾಷ್ಟ್ರೀಯ

ಮದುವೆಗೆ ಪೋಷಕರ ಅಡ್ಡಿ; ತಾಜ್‌ಮಹಲ್‌ ಬಳಿ ಕತ್ತು ಕೊಯ್ದುಕೊಂಡ ಪ್ರೇಮಿಗಳು !

Pinterest LinkedIn Tumblr

suicide

ಆಗ್ರಾ: ಪ್ರೇಮಸೌಧ ತಾಜ್‌ಮಹಲ್‌ಗೆ ಕೆಲವೇ ಮೀಟರ್‌ಗಳ ಅಂತರದಲ್ಲಿ ಬುಧವಾರ ವಿಹರಿಸುತ್ತಿದ್ದ ಪ್ರೇಮಿಗಳು ಬ್ಲೇಡ್‌ನಿಂದ ಪರಸ್ಪರರ ಕತ್ತು ಕೊಯ್ದಿರುವ ಘಟನೆ ಆಗ್ರಾದ ಜನತೆ, ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ವಿಭಾಗೀಯ ಅರಣ್ಯಾಧಿಕಾರಿಗಳು ಯುವ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಸದ್ಯ ಗಂಭೀರವಾಗಿದೆ.

ಇದು ಮುಸ್ಲಿಂ ಯುವತಿ, ಹಿಂದೂ ಯುವಕನ ಪ್ರೇಮ್‌ ಕಹಾನಿ. ಅವರಿಬ್ಬರ ಸಂಬಂಧವನ್ನು ಕುಟುಂಬ ಸದಸ್ಯರು ಒಪ್ಪದ ಕಾರಣ ಜಿಗುಪ್ಸೆಗೊಂಡ ಡೆಹ್ರಾಡೂನ್‌ ನಿವಾಸಿ ರಾಜ್‌ವೀರ್‌ ಸಿಂಗ್‌ ಹಾಗೂ ಆಗ್ರಾದ ಶಬನಂ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

‘ನಮ್ಮಿಬ್ಬರ ಮದುವೆಗೆ ಪೋಷಕರ ಒಪ್ಪಿಗೆ ಇಲ್ಲ. ಅವರ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ಧರ್ಮ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದೆ. ಧಾರ್ಮಿಕ ನಾಯಕರ, ಬಂಧುಗಳ ಮಧ್ಯಸ್ಥಿಕೆಯೂ ಪ್ರಯೋಜನವಾಗಿಲ್ಲ. ನಾವಿಬ್ಬರು ಜತೆ ಇರಲು ಸಾಧ್ಯವೇ ಇಲ್ಲ ಎಂದು ಮನವರಿಕೆ ಆದ ನಂತರ ಸಾಯುವ ನಿರ್ಧಾರ ಮಾಡಿದೆವು,’ ಎಂದು ಮಾತನಾಡಲು ಕಷ್ಟಪಡುತ್ತಿರುವ ರಾಜ್‌ವೀರ್‌ ಹೇಳಿಕೆ ನೀಡಿದ್ದಾನೆ. ಪ್ರೇಮಿಗಳ ಹೇಳಿಕೆ ದಾಖಲಿಸಲು ನಗರದ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ಎಂ.ಪಿ ಸಿಂಗ್‌ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆಸ್ಪತ್ರೆಗೆ ಭೇಟಿ ನೀಡಿದ್ದ ಯುವತಿಯ ಬಂಧುಗಳು ಅವರಿಬ್ಬರ ಮದುವೆ ಮಾಡಿಸಲು ಸಿದ್ಧವಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆ ಯತ್ನದ ಆರೋಪದ ಮೇಲೆ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Write A Comment