ರಾಷ್ಟ್ರೀಯ

ಎಚ್ಐವಿ ರೋಗಿಯಾ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸುವ ಮೂಲಕ ಅಮಾನವೀಯತೆಯನ್ನು ತೋರಿದ ಆಸ್ಪತ್ರೆ

Pinterest LinkedIn Tumblr

hiv

ಮೀರತ್: ಆರೋಗ್ಯ ಮಾಹಿತಿಗಳನ್ನು ಗುಪ್ತವಾಗಿಡಬೇಕಾದ ವೈದ್ಯ ಸಿಬ್ಬಂದಿಯೇ, ರೋಗಿಯೊಬ್ಬರು ಎಚ್ಐವಿ ಪಾಸಿಟಿವ್‌ನಿಂದ ಬಳಲುತ್ತಿದ್ದಾರೆ ಎಂಬ ವಿಷಯವನ್ನು ಉತ್ತರ ಪ್ರದೇಶದ ಆಸ್ಪತ್ರೆಯೊಂದು ಜಗಜ್ಜಾಹೀರುಗೊಳಿಸಿದ ಅಮಾನವೀಯ ಘಟನೆ ವರದಿಯಾಗಿದೆ.

ಎಚ್ಐವಿ ಪಾಸಿಟಿವ್‌ ಮಹಿಳೆ ಮೀನಾ (30) (ಹೆಸರು ಬದಲಾಯಿಸಲಾಗಿದೆ) ಎಂಬುವವರು ಇಲ್ಲಿನ ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯ ಕಾಲೇಜ್‌ಗೆ ಜೂ.19ರಂದು ಹೆರಿಗೆಗೆ ದಾಖಲಾಗಿದ್ದರು. ವೈದ್ಯರು ಅವರ ಹಾಸಿಗೆಗೆ ‘ಜೈವಿಕ ಅಪಾಯಕಾರಿ ಪಾಸಿಟಿವ್’ ಎಂದು ಬರೆದಿರುವ ದೊಡ್ಡ ಫಲಕವೊಂದನ್ನು ಹಾಕಿದ್ದಲ್ಲದೇ, ಏಡ್ಸ್‌ ರೋಗವನ್ನು ಸೂಚಿಸುವಂಥ ಕೆಂಪು ರಿಬ್ಬನ್‌ವೊಂದನ್ನು ಕಟ್ಟುವ ಮೂಲಕ ಮಾರಾಣಾಂತಿಕ ರೋಗದಿಂದ ಮಹಿಳೆ ಬಳಲುತ್ತಿರುವುದನ್ನು ಜಗತ್ತಿಗೇ ತಿಳಿಯುವಂತೆ ಮಾಡಿದ್ದರು. ಅಷ್ಟೇ ಅಲ್ಲ, ಚಿಕಿತ್ಸೆ ನೀಡಿದ ನಂತರ ಮಹಿಳೆಯಿಂದಲೇ ವೈದ್ಯ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದ್ದರು.

‘ರೋಗವಿರುವ ಮತ್ತೊಂದು ಮಗುವನ್ನು ಪ್ರಪಂಚಕ್ಕೆ ತರುತ್ತಿರುವೆ,’ ಎಂದೂ ವೈದ್ಯರು ಆಕೆಯನ್ನು ಹೀಯಾಳಿಸಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ್ದ ಬಂಧು-ಮಿತ್ರರಿಗೆ ಮಹಿಳೆ ಎಚ್‌ಐವಿ ಪಾಸಿಟಿವ್ ಎಂದು ಗೊತ್ತಾದ್ದರಿಂದ, ಮಹಿಳೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಮಹಿಳೆಯನ್ನು ಆಸ್ಪತ್ರೆ ಸಿಬ್ಬಂದಿ ಅಮಾನವೀಯವಾಗಿ ನಡೆಸಿಕೊಂಡಿರುವ ಬಗ್ಗೆ ಎಚ್‌ಐವಿ ಬಾಧಿತರ ಹಕ್ಕಿಗಾಗಿ ಹೋರಾಡುವ ಕೇರ್ ಸಪೋರ್ಟ್ ಸೆಂಟರ್‌ ಗಮನಕ್ಕೆ ಬಂದು, ಆಸ್ಪತ್ರೆಗೆ ಭೇಟಿ ನೀಡಿದೆ. ಮಹಿಳೆಯ ರೋಗದ ಬಗ್ಗೆ ಮಾಹಿತಿ ನೀಡುವ ಬರಹಗಳನ್ನು ತೆಗೆದು ಹಾಕಿ, ಸಂಬಂಧಿಸಿದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ, ತಕ್ಷಣವೇ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಯತ್ನಿಸಿದೆ.

ಇದೊಂದು ‘ದುರಾದೃಷ್ಟಕರ’ ಘಟನೆ ಎಂದ ಆಸ್ಪತ್ರೆಯ ಪ್ರಸವ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥ ಅಭಿಲಾಷ್ ಗುಪ್ತಾ , ಆಸ್ಪತ್ರೆ ವೈದ್ಯರು ರೋಗಿಗೆ ಲಿಖಿತ ಕ್ಷಮಾಪಣ ಪತ್ರ ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಮುಖ್ಯ ವ್ಯವಸ್ಥಾಪಕ ಸುಭಾಷ್ ಸಿಂಗ್‌ ಭರವಸೆ ನೀಡಿದ್ದಾರೆ.

ಗೌಪ್ಯತೆ ಕಾಪಾಡಿಕೊಂಡಿದ್ದೆ: ‘ಎಂಡು ವರ್ಷಗಳ ಹಿಂದೆಯೇ ಈ ರೋಗ ಪತಿಯಿಂದ ನನಗೆ ಬಂದಿದ್ದು, ವಿಷಯದ ಗೌಪ್ಯತೆ ಕಾಪಾಡಿಕೊಂಡಿದ್ದೆ. ಆದರೆ, ವೈದ್ಯರ ನಡೆಯಿಂದ ಈ ವಿಷಯವೀಗ ಜಗಜ್ಜಾಹೀರುಗೊಂಡಿದೆ. ನನ್ನ ಪರಿಸ್ಥಿತಿ ಬಗ್ಗೆ ಹೀನಾಯವಾಗಿ ಮಾತನಾಡಿದ್ದಲ್ಲದೇ, ರೋಗವಿಲ್ಲದ ನನ್ನ ಹೆಣ್ಣು ಮಗುವಿಗೂ ರೋಗವಿರುವುದಾಗಿ ಹೇಳಿದ್ದಾರೆ,’ ಎಂದು ಮೀನಾ ಕಣ್ಣೀರಿಟ್ಟಿದ್ದಾರೆ.

Write A Comment