ರಾಷ್ಟ್ರೀಯ

ಸ್ಮಾರ್ಟ್ ಸಿಟಿ ಯೋಜನೆಗೆ ಪ್ರಧಾನಿ ಚಾಲನೆ: ನಗರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆ

Pinterest LinkedIn Tumblr

smart-cityನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ  ನಗರಗಳ ಗುಣಮಟ್ಟ ಸುಧಾರಣೆಗಾಗಿ ಮತ್ತು ಹೊಸ ರೂಪುರೇಷೆ ನೀಡುವ ಮೂರು ಮಹತ್ವಾಕಾಂಕ್ಷಿ  ಯೋಜನೆಗಳಿಗೆ ಚಾಲನೆ ನೀಡಿದರು. ಅವುಗಳು ಸ್ಮಾರ್ಟ್ ಸಿಟಿ, ಅಮೃತ್ ಮತ್ತು ಸರ್ವರಿಗೂ ವಸತಿ ಯೋಜನೆಗಳಾಗಿವೆ.

ಹಲವು ನಗರಪಾಲಿಕೆ ಆಯುಕ್ತರು, ಮೇಯರ್, ರಾಜ್ಯ ಸರ್ಕಾರಗಳ ಸಚಿವರುಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿಗಳು, ನಮ್ಮ ದೇಶದ ನಗರ ಪ್ರದೇಶಗಳ ಸಂಪೂರ್ಣ ಬೆಳವಣಿಗೆಗೆ ಈ ಮೂರೂ ಯೋಜನೆಗಳು ಮುಖ್ಯವಾಗಿವೆ. ಇದು ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಗುವ ಕೆಲಸವಲ್ಲ. ಸ್ಥಳೀಯ ಆಡಳಿತಗಳ ಸಹಕಾರ ಅತ್ಯಂತ ಮುಖ್ಯ ಎಂದು ಹೇಳಿದರು.

ನಗರ ಪ್ರದೇಶಗಳ  ಮೂಲಭೂತ ಸೌಕರ್ಯಗಳ ವೃದ್ಧಿಗೆ ಮತ್ತು ಜನತೆಗೆ ಉತ್ತಮ ಸೇವೆ ಒದಗಿಸಲು ಸ್ಮಾರ್ಟ್ ಪರಿಹಾರವನ್ನು ಕಂಡುಕೊಳ್ಳುವ ಯೋಜನೆ ಕೇಂದ್ರ ಸರ್ಕಾರದ್ದಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಸುಮಾರು 48 ಸಾವಿರ ಕೋಟಿ ರೂಪಾಯಿ ತಗುಲಲಿದೆ. ಇದಕ್ಕಾಗಿ ಸರ್ಕಾರ ಆರಂಭದಲ್ಲಿ 100 ನಗರಗಳನ್ನು ಆರಿಸಿದೆ.

ಅಮೃತ್ ಯೋಜನೆಗೆ 50 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ದೇಶದ 500 ನಗರಗಳ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು, ಸಾರಿಗೆ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.

ನಗರದ ನಿವಾಸಿಗಳಿಗೆ ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸೂರು ಒದಗಿಸಲು ಎಲ್ಲರಿಗೂ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ದೇಶಾದ್ಯಂತ ಗೊತ್ತುಪಡಿಸಿರುವ 4 ಸಾವಿರದ 41 ಪಟ್ಟಣಗಳಲ್ಲಿ ನಗರದಲ್ಲಿರುವ ಬಡವರಿಗೆ ಕೇಂದ್ರ ಸರ್ಕಾರ ಮನೆ ನಿರ್ಮಿಸಿಕೊಡುವುದಾಗಿದೆ.

ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ, ಸ್ಮಾರ್ಟ್ ಸಿಟಿಯ ಮಾರ್ಗಸೂಚಿಗಳನ್ನು, ಅವುಗಳ ಲಾಂಛನ ಮತ್ತು ಅಡಿಬರಹಗಳನ್ನು ಬಿಡುಗಡೆ ಮಾಡಿದರು.

Write A Comment